Bengaluru

20 ಲಕ್ಷ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಗುರಿ; ಸಚಿವ ಡಾ.ಕೆ.ಸುಧಾಕರ್‌

ಬೆಂಗಳೂರು: ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ. ಆದರೆ ಲಸಿಕಾಕರಣದಿಂದ ನಿಯಂತ್ರಣ ಮಾಡಲಾಗಿದೆ. ಕೊರೊನಾ ನಿಯಂತ್ರಣದಲ್ಲಿ ಸಾಗಬೇಕಾದ ಹಾದಿ ಇನ್ನೂ ದೂರವಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಸಂಸ್ಥೆಯಲ್ಲಿ, 12 ರಿಂದ 14 ವರ್ಷದೊಳಗಿನ ಅರ್ಹ ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಲಸಿಕೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಲಸಿಕಾಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ಲಸಿಕೆ ಮೂಲಕ ಪೋಷಕರ ಆತಂಕ ದೂರ ಮಾಡುತ್ತಿದೆ. 12 ರಿಂದ 14 ವರ್ಷ ಮಕ್ಕಳು ಈ ಲಸಿಕೆ ತೆಗೆದುಕೊಂಡರೆ ಕೊರೊನಾ ವಿರುದ್ಧ ಹೋರಾಡಲು ಶಕ್ತಿ ಪಡೆಯಬಹುದು. ರಾಜ್ಯದಲ್ಲಿ 20 ಲಕ್ಷ ಮಕ್ಕಳಿಗೆ ಈ ಲಸಿಕೆ ನೀಡಲಾಗುವುದು. ಸರ್ಕಾರದ ಕ್ರಮಗಳಿಗೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ಲಸಿಕೆ ಪಡೆದವರು ಕೂಡ ಮುಂಜಾಗೃತಾ ಕ್ರಮಗಳನ್ನು ಮರೆಯುವ ಹಾಗಿಲ್ಲ. ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ. ಆದರೆ ಲಸಿಕಾಕರಣದಿಂದ ನಿಯಂತ್ರಣಕ್ಕೆ ಬಂದಿದೆ. ಈ ವಿಚಾರದಲ್ಲಿ ಸಾಗಬೇಕಾದ ಹಾದಿ ದೂರವಿದೆ. ಇನ್ನೂ ಹಲವು ಅಲೆಗಳು ಬರಬಹುದು ಎಂಬ ಆತಂಕವಿದೆ. ಲಸಿಕಾಕರಣದಿಂದ ಅದೆಲ್ಲವನ್ನೂ ದೂರ ಮಾಡಬಹುದು. ಮಾಸ್ಕ್, ಭೌತಿಕ ಅಂತರದ ಮೂಲಕ ಮುಂಜಾಗೃತ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

Share Post