Bengaluru

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ನಾಗರಿಕ ಜಲಮಾರ್ಗ ಯೋಜನೆ ಕಾಮಗಾರಿ ಪರಿಶೀಲನೆ

ಬೆಂಗಳೂರು;ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕೆ-100(ನಾಗರಿಕ ಜಲಮಾರ್ಗ) ಯೋಜನೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮಾನ್ಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಶಾಲಿನಿ ರಜನೀಶ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋರಮಂಗಲ ರಾಜಕಾಲುವೆ(ಕೆ-100) ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗಿನ 9.2 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಜಲಮಾರ್ಗ ಯೋಜನೆ ಕಾಮಗಾರಿ ಪ್ರಗತಿ ಕುರಿತಂತೆ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಂಬಾರಗುಂಡಿ ಬಳಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲು ನಿರ್ಮಸುತ್ತಿರುವ 05 ಎಂ.ಎಲ್.ಡಿ ಎಸ್.ಟಿ.ಪಿಯ(ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕೂಡಲೆ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿ ಘಟಕವನ್ನು ಕಾರ್ಯಾರಂಭಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬನ್ನೇರಘಟ್ಟ ಮುಖ್ಯ ರಸ್ತೆ ವಿಲ್ಸನ್ ಗಾರ್ಡನ್ ಹತ್ತಿರ ರಾಜಕಾಲುವೆ ಅಭಿವೃದ್ಧಿಕಾರ್ಯವನ್ನು ಪರಿಸೀಲಿಸಿದ ಬಳಿಕ ಮಾರಪ್ಟ ಗಾರ್ಡನ್ ಬಳಿ ರಾಜಕಾಲುವೆ ಪಕ್ಕದಲ್ಲಿ ಒತ್ತುವರಿಯಾಗಿರುವ ಪ್ರದೇಶವನ್ನು ಪರಿಶೀಲಿಸಿ ಸರ್ವೇ ಮಾಡಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿ ರವರಿಗೆ ಸೂಚನೆ ನೀಡಿದರು.

ಇಂಟರ್ ಮೀಡಿಯೆಟ್ ಸೀವೆಜ್ ಪಂಪಿಂಗ್ ಸ್ಟೇಷನ್ ನಿರ್ಮಾಣ:

ಶಾಂತಿನಗರ ಬಸ್ ನಿಲ್ದಾಣದ ಬಳಿ ನಾಗರಿಕ ಜಲಮಾರ್ಗ ಪರಿಶೀಲನೆಯ ವೇಳೆ ರಾಜಕಾಲುವೆಗೆ ತ್ಯಾಜ್ಯನೀರು ಬರುತ್ತಿರುವುದನ್ನು ಗಮನಿಸಿ, ರಾಜಕಾಲುವೆಗೆ ತ್ಯಾಜ್ಯ ನೀರು ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಅದಕ್ಕಾಗಿ ಜಲಮಂಡಳಿಯು ಕೂಡಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.

ಈ ವೇಳೆ ಜಲಮಂಡಳಿಯ ಮುಖ್ಯ ಅಭಿಯಂತರರು ಪ್ರತಿಕ್ರಿಯಿಸಿ, ರಾಜಕಾಲುವೆಗೆ ತ್ಯಾಜ್ಯ ನೀರು ಬರುವುದನ್ನು ನಿಲ್ಲಿಸುವ ಸಲುವಾಗಿ 15 ಎಂ.ಎಲ್.ಡಿ ಸಾಮರ್ಥ್ಯದ ಇಂಟರ್ ಮೀಡಿಯೆಟ್ ಸೀವೆಜ್ ಪಂಪಿಂಗ್ ಸ್ಟೇಷನ್(ISPS) ನಿರ್ಮಿಸಬೇಕಿದೆ. ಅದಕ್ಕಾಗಿ ಸ್ಥಳದ ಅವಶ್ಯಕತೆಯಿದ್ದು, ಕೆ.ಎಸ್.ಆರ್.ಟಿ.ಸಿಯ ಸ್ಥಳವನ್ನು ನೀಡಿದ್ದು, ಹಸ್ತಾಂತರ ಪ್ರಕ್ರಿಯೆ ಬಾಕಿಯಿದೆ ಎಂದು ತಿಳಿಸಿದಾಗ, ಕೂಡಲೆ ಸ್ಥಳ ಪರಿಶೀಲಿಸಿ ISPS ನಿರ್ಮಿಸಲು ಕೂಡಲೆ ಜಾಗ ಹಸ್ತಾಂತರಿಸಿಕೊಂಡು ಕೂಡಲೆ ಕಾಮಗಾರಿಯನ್ನು ಕೈಗೆತ್ತಿಕೊಂಡು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆ-100 ಯೋಜನೆಯ ಪ್ರಗತಿಯ ವಿವರ:

ಕೆ-100 ಯೋಜನೆಯು 9.2 ಕಿ.ಮೀ ಉದ್ದವಿದ್ದು, ಈಗಾಗಲೇ ಹೂಳೆತ್ತಿ ಕಲುಷಿತಗೊಂಡಿರುವ ರಾಜಕಾಲುವೆಯ ತಳಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನೀರು ಇಂಗುವಂತೆ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಲಾಗಿದೆ.

ರಾಜಕಾಲುವೆ ಮಾರ್ಗದ ಎರಡೂ ಬದಿಯ ತಡೆಗೋಡೆ, ತಳಮಟ್ಟದ ಸೇತುವೆಗಳನ್ನು ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸುವ ಕಾರ್ಯ ಬಹುತೇಖ ಪೂರ್ಣಗೊಂಡಿದೆ. ಹಸಿರೀಕರಣ, ರಾತ್ರಿ ಸಮಯದಲ್ಲಿ ಉದ್ಯಾನವನದ ರೀತಿಯಲ್ಲಿ ಅಲಂಕಾರಿಕ ವಿದ್ಯುಧೀಕರಣ ಅಳವಡಿಕೆ ಕಾರ್ಯ, ಗ್ರಾನೈಟ್ ಅಳವಡಿಕೆ, ತೋಟಗಾರಿಕೆ, ಪಾದಚಾರಿ ಮಾರ್ಗ, ಗ್ರಿಲ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ.

ರಾಜಕಾಲುವೆ ಮೇಲೆ ಎರಡೂ ಬದಿ ಸಂಚರಿಸಲು ಬ್ರಿಡ್ಜ್ ಗಳ ನಿರ್ಮಾಣ ಬಹುತೇಖ ಪೂರ್ಣಗೊಳಿಸಲಾಗಿದೆ. ವಿದ್ಯುತ್ ಅಳವಡಿಕೆಗಾಗಿ ಅತ್ಯಾಧುನಿಕ ಟ್ರಾನ್ಸ್ ಫಾರ್ಮ್ ಗಳನ್ನು ಅಳವಡಿಸಲಾಗಿದೆ. ಜೊತೆಗೆ ರಾಜಕಾಲುವೆಯ ಎರಡೂ ಬದಿಯ ಸರ್ವೀಸ್ ರಸ್ತೆ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಸವೀರ್ಸ್ ರಸ್ತೆಯಲ್ಲಿ ರಾಜಕಾಲುವೆಗೆ ಮಳೆ ನೀರು ಹರಿದು ಹೋಗದಂತೆ ಪೈಪ್ ಲೈನ್, ಕೇಬಲ್ ಅಳವಡಿಕೆಗೆ ಚೇಂಬರ್ ಗಳ ಕಾಮಗಾರಿ ಕೂಡಾ ಪೂರ್ಣಗೊಳಿಸಲಾಗಿದೆ.

ಈ ವೇಳೆ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್, ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಶ್ರೀ ದಯಾನಂದ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀ ಪ್ರಹ್ಲಾದ್, ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share Post