ಇಬ್ರಾಹಿಂ ಭೇಟಿಯಾದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಪಕ್ಷಕ್ಕೆ ಸೇರುವುದಾಗಿ ಘೋಷಣೆ ಮಾಡಿರುವ ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರ ಜತೆ ಇಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಇಬ್ರಾಹಿಂ ಇನ್ನೂ ತೀರ್ಮಾನ ತೆಗೆದುಕೊಳ್ಳಬೇಕಿದೆ. ಏನೂ ಒತ್ತಡ ಹಾಕಿ ತೀರ್ಮಾನ ತೆಗೆದುಕೊಳ್ಳಲು ಆಗಲ್ಲ. ನೋವಿನಿಂದ ಹಿಂದಿನ ಕೆಲ ಕಹಿ ಘಟನೆಗಳನ್ನು ಇಬ್ರಾಹಿಂ ಹೇಳಿಕೊಂಡಿದ್ದಾರೆ. ದೇವೇಗೌಡರಿಗೂ ಇಬ್ರಾಹಿಂ ಅವರಿಗೂ ಇರುವ ನಂಟು ಸಿದ್ದರಾಮಯ್ಯ ರಾಜಕೀಯಕ್ಕೆ ಬರುವ ಮೊದಲಿನಿಂದಲೂ ಇದೆ. 1972ರಿಂದ ದೇವೇಗೌಡರ ಜೊತೆ ಇಬ್ರಾಹಿಂ ಸಂಬಂಧ ಇದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನ ಜನ ತಿರಸ್ಕಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಯಾವಾಗ ತೀರ್ಮಾನ ಮಾಡಿದ್ರೂ ತುಂಬು ಹೃದಯದ ಸ್ವಾಗತ.
ಸಿದ್ದರಾಮಯ್ಯ ತಾವು ಬೆಳೆದರೆ ಹೊರತು, ನಂಬಿಸಿ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋದವರನ್ನು ಬೆಳೆಸಲಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. 2023ಕ್ಕೆ ಜೆಡಿಎಸ್ ಸರಕಾರ ಬರುತ್ತದೆ ಎಂದು ಇಬ್ರಾಹಿಂ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ನಮ್ಮ ಪಕ್ಷ ತಪ್ಪದೇ ಅಧಿಕಾರಕ್ಕೆ ಬರುತ್ತದೆ ಎಂಬ ಭರವಸೆ ಮಾತುಗಳನ್ನಾಡಿದ್ದಾರೆ.