Bengaluru

#ಹಿಂದಿ ಹೇರಿಕೆ ನಿಲ್ಲಿಸಿ: ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು:  ಹಿಂದಿ ಭಾಷೆ ಹೇರಿಕೆ ವಿರುದ್ಧ ಈಗಾಗಲೇ ರಾಜ್ಯದಲ್ಲಿ ಹಲವು ಪ್ರತಿಭಟನೆಗಳು ನಡೆದಿದ್ರೂ ಪ್ರಯೋಜನವಾಗಲಿಲ್ಲ. ಆದರೀಗ ಐಚ್ಚಿಕ ಕನ್ನಡ ಪ್ರಶ್ನೆ ಪತ್ರಿಕೆ ಕೂಡ ಹಿಂದಿಯಲ್ಲಿ ಇರುವುದಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ ʻಕನ್ನಡ ಕಟುಕರ ಕೈಯ್ಯಲ್ಲಿ ಸಿಲುಕಿಕೊಂಡಿದೆʼ ಎಂದು ಕಿಡಿ ಕಾರಿದ್ದಾರೆ.

ನಾನು ಮೊದಲಿನಿಂದಲೂ ಹೇಳುತ್ತಿರುವ ಮಾತಿದು. ಈ ಮಾತು ಪದೇ ಪದೇ ಮರುಕಳಿಸುತ್ತಿರುವುದ ನನಗೆ ಬಹಳ ನೋವುಂಟು ಮಾಡಿದೆ. ಕೇಂದ್ರ ಸರ್ಕಾರದ ಉದ್ಯೋಗ ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಇದೆ. ನಿನ್ನೆ ರಾಷ್ಟ್ರೀಯ ಪರಿಕ್ಷಾ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಯುಜಿಸಿ – ಎನ್ಇಟಿ ಕನ್ನಡ ಐಚ್ಛಿಕ ಭಾಷಾ ಪಶ್ನೆ ಪತ್ರಿಕೆಯ 100 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಹಿಂದಿಯಲ್ಲೇ ಇದ್ದವು. ಅದನ್ನು ಕಂಡ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿ ಪರೀಕ್ಷೆಯನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದಾರೆ.

ಇದು ಕನ್ನಡದ ಮೇಲಿನ ತಾತ್ಸಾರ ಹಾಗೂ ಹಿಂದಿ ಹೇರಿಕೆಯ ವಿಪರೀತ. ಅಲ್ಲದೆ, ಪರೀಕ್ಷೆ ನಡೆಸಿದ ಸಂಸ್ಥೆ ಮಾಡಿರುವ ಕನ್ನಡ ದ್ರೋಹ. ಉದ್ದೇಶಪೂರ್ವಕವಾಗಿಯೇ ಇಂಥ ಕೃತ್ಯಗಳನ್ನು ಕನ್ನಡದ ವಿರುದ್ಧ ಎಸಗಲಾಗುತ್ತಿದೆ. ಕನ್ನಡಿಗರ ಬಗ್ಗೆ ಈ ಕಠಿಣತೆ ಏಕೆ ಎಂದು ಪ್ರಶ್ನಿಸಿದ್ದಾರೆ. ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರಕಾರದ ಇನ್ನು ಹಲವಾರು ಉದ್ಯೋಗ ಅವಕಾಶಗಳಲ್ಲಿ ಕನ್ನಡದ ಪ್ರತಿಭಾವಂತ ಯುವಜನರಿಗೆ ಅನ್ಯಾಯ ಆಗುತ್ತಿದೆ. ಕನ್ನಡಿಗರ ಕಡೆಗಣನೆ ದೇಶಕ್ಕೆ ಒಳ್ಳೆಯದಲ್ಲ. ನಮ್ಮ ಮೌನ ನಮ್ಮ ದೌರ್ಬಲ್ಯವಲ್ಲ ಎಂಬುದು ನೆನಪಿರಲಿ. ಈ ಅನ್ಯಾಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ.

ಕೂಡಲೇ ಪರಿಕ್ಷಾ ಸಂಸ್ಥೆಯು ಆಗಿರುವ ಲೋಪ ಸರಿಮಾಡಿ ಪುನಾ ಪರೀಕ್ಷೆ ನಡೆಸಬೇಕು. ಎರಡು ವರ್ಷಗಳಿಂದ ಪರಿಕ್ಷೆಗಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತೆ ಕ್ರಮ ವಹಿಸಬೇಕು. ಪರೀಕ್ಷೆ ಅವ್ಯವಸ್ಥೆ ಆಗರವಾಗಿತ್ತು ಎನ್ನುವುದು ತಿಳಿದುಬಂದಿದೆ. ಅದನ್ನು ಸರಿಪಡಿಸಿ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

 

Share Post