Bengaluru

HARSHA MURDER CASE: ಈಶ್ವರಪ್ಪ ಪರಿಜ್ಞಾನ ಇಲ್ಲದೆ ಮಾತಾಡ್ತಾರೆ; ಡಿ.ಕೆ.ಶಿವಕುಮಾರ್‌ ಆಕ್ರೋಶ

ಬೆಂಗಳೂರು: ಹಿಜಾಬ್‌ ಹೋರಾಟಕ್ಕೂ ಶಿವಮೊಗ್ಗದಲ್ಲಿ ಹರ್ಷ ಕೊಲೆಗೂ ಸಂಬಂಧವಿಲ್ಲ. ನಾವು ಸಚಿವ ಈಶ್ವರಪ್ಪ ಅವರ ಹೇಳಿಕೆ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದೇವೆ. ಈ ವೇಳೆ ಶಿವಮೊಗ್ಗದಲ್ಲಿ ವೈಯುಕ್ತಕ ವಿಚಾರವಾಗಿ ಕೊಲೆ ನಡೆದಿದೆ. ಈ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಈ ಕೃತ್ಯ ಎಸಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹರ್ಷ ಕೊಲೆಗೆ ಡಿ.ಕೆ.ಶಿವಕುಮಾರ್‌ ಕುಮ್ಮಕ್ಕು ಕಾರಣ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ರಾಜಕೀಯ ಹೇಳಿಕೆಯನ್ನು ನಾನು ನೀಡುವುದಿಲ್ಲ. ಈಶ್ವರಪ್ಪ ನನ್ನ ವಿರುದ್ಧ ಹೇಳಿಕೆ ನೀಡುತ್ತಿರಬಹುದು. ನನ್ನ ವಿರುದ್ಧ ಮಾತನಾಡದಿದ್ದರೆ ಅವರ ಪಕ್ಷದಲ್ಲಿ ಅವರಿಗೆ ಸ್ಥಾನ ಸಿಗುವುದಿಲ್ಲ ಎಂದು ಅರಿತು ಈ ರೀತಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮೊದಲು ಅವರ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸಿ, ಬಂಧಿಸಬೇಕು. ಅವರನ್ನು ವಜಾ ಮಾಡಿದರೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತದೆ ಎಂದು ಹೇಳಿದರು.

ಈ ಹತ್ಯೆಗೆ ಧಾರ್ಮಿಕ ಬಣ್ಣ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಿದ್ದರಾಮಯ್ಯನವರು ಹೇಳಿರುವಂತೆ ಈಶ್ವರಪ್ಪನ ಮಿದುಳಿಗೂ ನಾಲಿಗೆಗೂ ಸಂಪರ್ಕವೇ ಇಲ್ಲ. ಈ ಹತ್ಯೆ ಯಾಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಬೇಕು. ಆದರೆ ಸಾಮಾನ್ಯ ಪರಿಜ್ಞಾನವೂ ಇಲ್ಲದೆ ಆತ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುತ್ತಿರುವುದಕ್ಕೆ ಈಶ್ವರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಲಿ. ಅವರು ದೇಶಕ್ಕೆ ತ್ಯಾಗ ಮಾಡಿರುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರು ಬರೀ ಹಾಲಿನ ಅಭಿಷೇಕ ಅಲ್ಲ, ತುಪ್ಪದ ಅಭಿಷೇಕ ಮಾಡಿಸಿಕೊಳ್ಳಲಿ’ ಎಂದು ಈಶ್ವರಪ್ಪರನ್ನು ಡಿ.ಕೆ.ಶಿವಕುಮಾರ್‌ ಛೇಡಿಸಿದರು.

Share Post