ಹೊಸ ವರ್ಷಕ್ಕೆ ಬೆಲೆ ಏರಿಕೆ ಬರೆ ಗ್ಯಾರೆಂಟಿ; ಹಾಲಿನ ಬೆಲೆ ಏರಿಕೆ ಬಹುತೇಕ ಫಿಕ್ಸ್!
ಬೆಳಗಾವಿ; ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಹಾಲು ಹಾಗೂ ಮೊಸರಿನ ಬೆಲೆಯಲ್ಲಿ ಮೂರು ರೂಪಾಯಿ ಏರಿಕೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಹಾಲು, ಮೊಸರಿನ ಬೆಲೆ ಏರಿಕೆ ಮಾಡೋದಕ್ಕೆ ಚಿಂತನೆ ನಡೆದಿದೆ. ಹಾಲು ಒಕ್ಕೂಟಗಳ ಮನವಿಯ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಹಾಲು ಹಾಗೂ ಮೊಸರಿನ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಕೂಡಾ ಬೆಳಗಾವಿ ಅಧಿವೇಶನದಲ್ಲಿ ಸುಳಿವು ಕೊಟ್ಟಿದೆ. ಹಾಲಿನ ದರ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲನೆಯಲ್ಲಿದ್ದೇವೆ ಎಂದು ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್ ಶಾಸಕ ನಂಜೇಗೌಡ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಹಲವಾರು ಖಾಸಗಿ ಹಾಲಿನ ಬ್ರಾಂಡ್‌ಗಳಿವೆ. ಅವುಗಳ ದರಕ್ಕೆ ಹೋಲಿಸಿಕೊಂಡರೆ ನಂದಿನ ಹಾಲಿನ ದರ 10-12 ರೂಪಾಯಿ ಕಡಿಮೆ ಇದೆ. ಇದರಿಂದಾಗಿ ಹಾಲು ಉತ್ಪಾದನೆ ಮಾಡುವವರು ಹಾಗೂ ಒಕ್ಕೂಟಗಳು ನಷ್ಟದಲ್ಲಿವೆ. ಇದನ್ನು ಮನಗಂಡು ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ದರ ಏರಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗವುದು ಎಂದು ಸಚಿವರು ಸದನಕ್ಕೆ ಉತ್ತರ ಕೊಟ್ಟಿದ್ದಾರೆ. ಹೀಗಾಗಿ ಹೊಸ ವರ್ಷದಲ್ಲಿ ನಂದಿನ ಉತ್ಪನ್ನಗಳ ದರ ಏರಿಕೆಯಾಗೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ರಾಜ್ಯದ 14 ಹಾಲು ಒಕ್ಕೂಟಗಳು ಹಾಲಿವನ ದರ ಲೀಟರ್‌ಗೆ 5 ರೂಪಾಯಿ ಏರಿಕೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಆದ್ರೆ ಸರ್ಕಾರ ಕೇವಲ 3 ರೂಪಾಯಿ ಏರಿಕೆ ಮಾಡಿತ್ತು. ಅದೂ ಕೂಡಾ ಆ ಮೂರು ರೂಪಾಯಿ ನೇರವಾಗಿ ರೈತರಿಗೆ ನೀಡಲಾಗಿತ್ತು. ಹೀಗಾಗಿ ನಷ್ಟದಲ್ಲಿರುವುದರಿಂದ ದರ ಏರಿಕೆ ಮಾಡುವಂತೆ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ.