ಯುಗಾದಿ ಹಬ್ಬಕ್ಕೆ KSRTC ಯಿಂದ 600 ಹೆಚ್ಚುವರಿ ಬಸ್: ಮೆಟ್ರೋ ಪ್ರಯಾಣಿಕರಿಗೆ 1-3ದಿನದ ಪಾಸ್
ಬೆಂಗಳೂರು: ಹಬ್ಬಗಳು ಬಂದರೆ ಜನ ತಮ್ಮ ತಮ್ಮ ಊರುಗಳಿಗೆ ತೆರಳುವುದು ರೂಢಿ. ಬದುಕನ್ನರಸಿ ಸ್ವಂತ ಊರುಗಳನ್ನು ಬಿಟ್ಟು ಕೆಲಸದ ನಿಮಿತ್ತ ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ವಾಸ ಮಾಡುತ್ತಿರುತ್ತಾರೆ. ಹಬ್ಬ-ಹರಿದಿನಗಳು ಬಂದ್ರೆ ಎಲ್ಲರೂ ತಮ್ಮ ಸ್ವಂತ ಊರುಗಳಿಗೆ ಹೋಗಲು ಪರದಾಡಬೇಕಾಗುತ್ತದೆ. ಯಾಕಂದ್ರೆ ಬಸ್‌ಗಳ ಕೊರತೆ, ಹೆಚ್ಚಿನ ಜನಸಂದಣಿ ಕಾರಣದಿಂದ ಪ್ರಯಾಣ ಕಷ್ಟಕರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ನೀಡಿದೆ.
ಹೌದು, ಯುಗಾದಿ ಹಬ್ಬ ಹಿನ್ನೆಲೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ KSRTCವತಿಯಿಂದ ಹೆಚ್ಚುವರಿಯಾಗಿ 600ಬಸ್‌ಗಳನ್ನು ಬಿಗುಗಡೆ ಮಾಡಿದೆ. ಬೆಂಗಳೂರಿನಿಂದ ನಾನಾ ಭಾಗಗಳಿಗೆ ತೆರಳಲು ಅನುಕೂಲವಾಗಲಿದೆ. ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ, ಧರ್ಮಸ್ಥಳ, ಕೇರಳ, ತಮಿಳುನಾಡು ಸೇರಿದಂತೆ ನಾನಾ ಭಾಗಗಳಿಗೆ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿದೆ. ಎಲ್ಲಾ ಬಸ್‌ಗಳಲ್ಲಿಯೂ ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ.
ಮುಂಗಡ ಕಾಯ್ದಿರಿಸಿದ್ರೆ ಟಿಕೆಟ್ ದರದಲ್ಲಿ ರಿಯಾಯಿತಿ
ಒಂದೇ ಬಸ್‌ನಲ್ಲಿ ನಾಲ್ಕು ಅಥವಾ ಹೆಚ್ಚು ಜನರು ಟಿಕೆಟ್ ಬುಕ್ ಮಾಡುವವರಿಗೆ ಶೇ.5 ರಷ್ಟು ರಿಯಾಯಿತಿ ನೀಡಲಿದ್ದಾರೆ. ಹೋಗುವ ಮತ್ತು ಬರುವ ಟಿಕೆಟ್ ಮುಂಗಡ ಬುಕ್ ಮಾಡಿದ್ರೆ 10%ರಿಯಾಯಿತಿ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಮೆಟ್ರೋ ಪ್ರಯಾಣಿಕರಿಗೆ ಅನ್‌ಲಿಮಿಟೆಡ್ ಪ್ರಯಾಣ ಪಾಸ್
ಹಾಗೆ ಬಿಎಂಆರ್‌ಸಿಎಲ್ ಕೂಡ ಪ್ರಯಾಣಿಕರಿಗೆ ಬಂಪರ್ ಗಿಫ್ಟ್ ನೀಡಿದೆ. ಹಬ್ಬಕ್ಕೆ ದೇವಸ್ಥಾನಗಳು, ಬಸ್ಟಾಂಡ್, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧೆಡೆ ತೆರಳುವವರಿಗೆ ಪಾಸ್ ಸೌಲಭ್ಯ ನೀಡಿದೆ. 1 ರಿಂದ 3 ದಿನದ ಪಾಸ್ ಅನ್ನು ಬಿಎಂಆರ್‌ಸಿಎಲ್ ನೀಡ್ತಿದೆ. ಒಂದು ದಿನದ ಪಾಸ್ಗೆ 200 ರೂಪಾಯಿ ನಿಗದಿಯಾಗಿದೆ. ಖರೀದಿ ದಿನದಂದು ಅನಿಯಮಿತವಾಗಿ ಪ್ರಯಾಣಿಸಬಹುದು. ಮೂರು ದಿನದ ಪಾಸ್ಗೆ 400 ರೂಪಾಯಿ ನಿಗದಿಗೊಳಿಸಲಾಗಿದೆ. ಖರೀದಿ ದಿನದಿಂದ 3 ದಿನ ಅನ್‌ಲಿಮಿಟೆಡ್ ಪ್ರಯಾಣ ಮಾಡಬಹುದು. ಪಾಸ್ ಮೊತ್ತದಲ್ಲಿ 50 ರೂ. ಹಿಂಪಡೆಯಲು ಅವಕಾಶವಿದೆ. ಈ ಕುರಿತು ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ.