BengaluruPolitics

ಉಸಿರಾಡುವ ಆಮ್ಲಜನಕಕ್ಕೂ ಜಿಎಸ್‌ಟಿ ವಿಧಿಸ್ತಾರೆ; ಖರ್ಗೆ ಗರಂ

ಬೆಂಗಳೂರು; ವಾಕಿಂಗ್‌ ವೇಳೆ ಉಸಿರಾಡುವ ಆಮ್ಲಜನಕಕ್ಕೂ ಜಿಎಸ್‌ಟಿ ವಿಧಿಸುವ ಕಾಲ ದೂರದಲ್ಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ರೋಡ್‌ ಶೋನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ. ಗಾಳಿ ಒಂದು ಬಿಟ್ಟು ಎಲ್ಲದಕ್ಕೂ ಜಿಎಸ್‌ಟಿ ಹಾಕುತ್ತಿದ್ದಾರೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಬಸವನಗುಡಿಯ ಜನ ಸಾಕಷ್ಟು ಆರೋಗ್ಯ ಕಾಳಜಿ ಹೊಂದಿದ್ದಾರೆ. ಅವರು ಬೆಳಗ್ಗೆ ಹಾಗೂ ಸಂಜೆ ವಾಕಿಂಗ್‌ ಹೋಗುತ್ತಾರೆ. ಆದ್ರೆ ಮುಂದೆ ವಾಕಿಂಗ್‌ ಮಾಡುವಾಗ ಉಸಿರಾಡುವ ಆಮ್ಲಜನಕಕ್ಕೂ ಜಿಎಸ್‌ಟಿ ಹಾಕಿದರೂ ಅಚ್ಚರಿ ಇಲ್ಲ ಎಂದು ಹೇಳಿದರು. ಮಕ್ಕಳ ವಸ್ತುಗಳು, ಹಾಲು-ಮೊಸರಿನ ಮೇಲೂ ಜಿಎಸ್‌ಟಿ ಹಾಕ್ತಿದ್ದಾರೆ, ಹಾಗಿದ್ಮೇಲೆ ಮುಂದೆ ಗಾಳಿಗೂ ಜಿಎಸ್‌ಟಿ ಹಾಕಬಹುದು ಎಂದರು.

ಬಿಜೆಪಿ ಜನವಿರೋಧಿ ಧೋರಣೆ ಹೊಂದಿದೆ. ಹೀಗಾಗಿ ಕಾಂಗ್ರೆಸ್‌ ಬೆಂಬಲಿಸುವಂತೆ ಖರ್ಗೆ ಅವರು ಮನವಿ ಮಾಡಿದರು. ಬಿಜೆಪಿಯವರು ಕೊಟ್ಟ ಭರವಸೆಯನ್ನು ಈಡೇರಿಸಲಿಲ್ಲ. ಬದಲಾಗಿ ನಲವತ್ತು ಪರ್ಸೆಂಟ್‌ ಕಮೀಷನ್‌ ಪಡೆದಿದ್ದೇ ಅವರ ಸಾಧನೆ ಎಂದು ಆರೋಪ ಮಾಡಿದರು.

Share Post