Bengaluru

ಭವಿಷ್ಯದಲ್ಲಿ ಸಂಭಾವ್ಯ ಅಲೆಗಳನ್ನು ಎದುರಿಸಲು ಸಿದ್ಧರಾಗಬೇಕು: ಗೌರವ್ ಗುಪ್ತ

ಬೆಂಗಳೂರು: ಕೊರೊನಾ ಮೂರನೇ ಅಲೆಯನ್ನು ಎಲ್ಲರ ಸಹಾಯದಿಂದ ಯಶಸ್ವಿಯಾಗಿ ನಿಭಾಯಿಸಲಾಗಿದ್ದು, ನಮ್ಮ ಮುಂದಿನ ಗುರಿ ಭವಿಷ್ಯದಲ್ಲಿ ಸಂಭಾವ್ಯ ಅಲೆಗಳನ್ನು ಎದುರಿಸುವ ಬಗೆಗಿರಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಹೇಳಿದರು.

ಪಾಲಿಕೆಯ ಕೋವಿಡ್-19 ತಜ್ಞರ ಸಮಿತಿಯೊಂದಿಗೆ ಇಂದು ನಡೆದ ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಕ್ರಿಯಾಶೀಲ ಸಂಚಾರಿ ಟ್ರಯಾಜ್ ಘಟಕ ಮತ್ತು ಟೆಲಿ ಟ್ರಯಾಜ್ ಘಟಕ, ವೈದ್ಯರು ಮತ್ತು ಸಿಬ್ಬಂದಿಗಳ ತಂಡದ ನೆರವಿನಿಂದ ದಿನಕ್ಕೆ 3,000ಕ್ಕೂ ಹೆಚ್ಚು ಕೋವಿಡ್ ಸೋಂಕಿತರಿಗೆ ಅವರವರ ಮನೆಯಲ್ಲಿ ಟ್ರಯಾಜ್ ಮಾಡಲಾಗುತ್ತಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ತಗ್ಗುತ್ತಿದ್ದು, ಎಲ್ಲರ ಶ್ರಮದಿಂದ ಕೊರೊನಾ ಮೂರನೇ ಅಲೆಯನ್ನು ನಿಭಾಯಿಸಲಾಗುತ್ತಿದೆ. ಮುಂದೇನಾದರೂ ಹೊಸ ಅಲೆಗಳು ಬಂದಲ್ಲಿ ಅವನ್ನು ಎದುರಿಸುವ ಬಗ್ಗೆ ನಾವು ಸಿದ್ಧರಾಗಿರಬೇಕಿದೆ ಎಂದು ತಿಳಿಸಿದರು.

ನಗರದಲ್ಲಿ ಮೂರನೇ ಅಲೆಯ ಬಗ್ಗೆ ಜನರಲ್ಲಿನ ಭಯ ಹೋಗಲಾಡಿಸಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಾಯಿತು. ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಗಮನ ಹರಿಸಲಾಯಿತು. ಲಸಿಕಾಕರಣವನ್ನೂ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣವು ನಿರ್ದೇಶಿತ ಗುರಿ ತಲುಪಲಿದೆ. ಇನ್ನೊಂದೆಡೆ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಕಡಿಮೆಯಿದೆ ಎಂದು ಹೇಳಿದರು.

ಜನವರಿಯಲ್ಲಿ ತಿಂಗಳಲ್ಲಿ ಕೋವಿಡ್ ದಾಖಲಾತಿಗಳಲ್ಲಿ ಕೇವಲ ಶೇ. 1.8 ಸಕ್ರಿಯ ಪ್ರಕರಣಗಳಿದ್ದವು. ಅದರಲ್ಲಿ‌ ಹೆಚ್ಚಿನವರು 60 ವರ್ಷ ಮೇಲ್ಪಟ್ಟವರು. ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟು ICU ನಲ್ಲಿ ದಾಖಲಾಗುವ ಎಲ್ಲಾ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ. ಈ ಸಂಬಂಧ ಗಂಭೀರ ಪ್ರಕರಣಗಳ ಪೈಕಿ ಆಸ್ಪತ್ತೆಗೆ ದಾಖಲಾಗಿರುವವರ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಕಳುಹಿಸಲಾಗುತ್ತದೆ. ಪ್ರಸ್ತುತ ಅಂತಹ ಎಲ್ಲಾ ಮಾದರಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Share Post