ಬಿಎಂಟಿಸಿ ಬಸ್ ಧಗಧಗ: ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು
ಬೆಂಗಳೂರು: ಹಲವಾರು ಕಾರಣಗಳಿಂದ ವಾಹನಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಸುಟಗಟು ಭಸ್ಮವಾಗುವ ಘಟನೆಗಳು ಇದೇ ಹೊಸದೇನಲ್ಲ. ಅಂತೆಯೇ ಇಂದು ಕೂಡ ನಡೆರಸ್ತೆಯಲ್ಲಿಯೇ ಬಿಎಂಟಿಸಿ ಬಸ್ ಹೊತ್ತಿ ಉರಿದ ಘಟನೆ ನಡೆದಿದೆ.
ರಾಜ್ಯ ರಾಜಧಾನಿಯ ಜಯನಗರ ಸೌತ್ ಎಂಡ್ ಸರ್ಕಲ್ ಬಳಿಯ ಮೆಟ್ರೋ ಫ್ಲೈ ಓವರ್ ಕೆಳಗೆ ಇಂದು ಮಧ್ಯಾಹ್ನ 1.15ರ ಸುಮಾರಿಗೆ, 30 ಪ್ರಯಾಣಿಕರಿದ್ದ ಬಿಎಂಟಿಸಿ ಬಸ್ ಹೊತ್ತಿ ಉರಿದಿದೆ. ಏಕಾಏಕಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ನಡು ರಸ್ತೆಯಲ್ಲಿಯೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ.
ನೋಡನೋಡುತ್ತಿದ್ದಂತೆ ಬಸ್ ಧಗಧಗನೆ ಹೊತ್ತಿ ಉರಿದಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸುವಷ್ಟರಲ್ಲಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ತಾಂತ್ರಿಕ ಕಾರಣದಿಂದಾಗಿ ಬಸ್‌ಗೆ ಬೆಂಕಿ ಬಿದ್ದರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅಗ್ನಿ ಅವಘಡ ಉಂಟಾಗಿದ್ದರಿಂದ ಕೆಲಕಾಲ ಆ ಮಾರ್ಗ ಟ್ರಾಫಿಕ್ ಜಾಮ್ ಉಂಟಾಗಿತ್ತು.