ಕೊವಿಡ್ ಹೆಚ್ಚಳ ಹಿನ್ನೆಲೆ ಪೋಷಕರಲ್ಲಿ ಭೀತಿ; ಶಾಲೆಗಳಲ್ಲಿ ಕಟ್ಟೆಚ್ಚರ
ಬೆಂಗಳೂರು; ರಾಜ್ಯದಲ್ಲಿ JN.1 ವೈರಸ್ ಭೀತಿ ಹೆಚ್ಚಾಗುತ್ತಿದೆ. ಕೊವಿಡ್ ಪಾಸಿಟಿವ್ ಪ್ರಮಾಣ ಕೂಡಾ ದಿನೇದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಬಗ್ಗೆ ಆತಂಕ ಶುರುವಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕೋ ಬೇಡವೋ ಎಂಬುದರ ಭೀತಿಗೊಳಗಾಗಿದ್ದಾರೆ. ಆದ್ರೆ ಸರ್ಕಾರಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದರಿಂದ ಯಾವುದೇ ಭೀತಿ ಅವಶ್ಯಕತೆ ಇಲ್ಲ. ಇನ್ನು ಖಾಸಗಿ ಶಾಲೆಗಳು ಸೇರಿ ಎಲ್ಲಾ ಶಾಲೆಗಳಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಶಾಲೆಗಳಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಲ್ಲಿ ಕೊರೊನಾಗೆ ಮೂವರು ಬಲಿಯಾಗಿದ್ದಾರೆ. ಹೀಗಾಗಿ, ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡೋದಕ್ಕೆ ಚಿಂತನೆ ನಡೆಸಲಾಗುತ್ತಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಪೋಷಕರಿಗೆ ಕೂಡಾ ಶಾಲಾ ಆಡಳಿತ ಮಂಡಳಿಗಳು ಸಂದೇಶಗಳನ್ನು ರವಾನಿಸಿವೆ. ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳುವಂತೆ ಸೂಚನೆ ಕೊಡಲಾಗಿದೆ.
ಮಕ್ಕಳಿಗೆ ಜ್ವರ, ಕೆಮ್ಮು, ಶೀತ ಇದ್ದರೆ ಶಾಲೆಗೆ ಕಳುಹಿಸದಂತೆ ಸೂಚನೆ ನೀಡಲಾಗಿದೆ.
ಖಾಸಗಿ ಶಾಲಾ ಒಕ್ಕೂಟದಿಂದ ಮಾರ್ಗಸೂಚಿ ಬಿಡುಗಡೆ
ಕ್ಯಾಮ್ಸ್ ಶಾಲಾ ಒಕ್ಕೂಟ ಕೊರೊನಾ ಬಗ್ಗೆ ಅಲರ್ಟ್ ಘೋಷಣೆ ಮಾಡಿದೆ. ಶಾಲೆಗಳಲ್ಲಿ ಮಾರ್ಗಸೂಚಿ ಪಾಲನೆ ಮಾಡಲು ಸೂಚನೆ ನೀಡಲಾಗಿದೆ.
JN.1 ಬಗ್ಗೆ ಸುಳ್ಳು ಸುದ್ದಿಯನ್ನು ನಂಬಬೇಡಿ, ಮಕ್ಕಳಲ್ಲಿ ಗಾಬರಿ ಹುಟ್ಟಿಸಬೇಡಿ
ಮಕ್ಕಳ ದೇಹದ ಉಷ್ಣಾಂಶವನ್ನು ದಿನವೂ ಪರಿಶೀಲನೆ ಮಾಡಬೇಕು
ಮಕ್ಕಳು ಶಾಲೆ ಬರುವಾಗ ಅವರಿಗೆ ಸ್ಯಾನಿಟೈಸರ್ ಹಾಕಬೇಕು
ಶಾಲಾ ಆವರಣವನ್ನು ಆಗಾ ಸ್ಯಾನಿಟೈಸ್ ಮಾಡ್ತಾ ಇರಬೇಕು
ಆರೋಗ್ಯ ಸಮಸ್ಯೆ ಇರುವ ಮಕ್ಕಳು ಮಾಸ್ಕ್ ಧರಿಸುವಂತೆ ಸೂಚನೆ ನೀಡಬೇಕು