ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಕ್ಯಾನ್ಸಲ್; ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ
ಬೆಂಗಳೂರು; ಕಳೆದ ಎರಡು ವಾರಗಳಿಂದ ಜಾರಿಯಲ್ಲಿದ್ದ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡಲು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವೀಕೆಂಡ್ ಕರ್ಫ್ಯೂಗೆ ಎಲ್ಲೆಡೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಲವೇ ಕ್ಷಣಗಳಲ್ಲಿ ಸರ್ಕಾರ ಅಧಿಕೃತವಾಗಿ ಪ್ರಕಟಣೆ ಮಾಡಲಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳು, ಸಚಿವರು ಹಾಗೂ ತಜ್ಞರ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಕೊವಿಡ್ ನಿಯಮಗಳ ಕುರಿತಂತೆ ಚರ್ಚೆ ನಡೆದಿದೆ. ಯೂರೋಪ್‌ನಲ್ಲಿ ಮೂರನೇ ಅಲೆ ತೀವ್ರವಾಗಿ ಹರಡಿದೆ. ಹೀಗಿದ್ದರೂ ಅಲ್ಲಿ ಯಾವುದೇ ಕರ್ಫ್ಯೂ ಸೇರಿದಂತೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ. ಹೀಗಾಗಿ ಇಲ್ಲೂ ವೀಕೆಂಡ್ ಕರ್ಫ್ಯೂ ರದ್ದು ಮಾಡಬೇಕೆಂದು ಕೆಲವರು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಿಎಂ ಕೂಡಾ ಸಹಮತ ವ್ಯಕ್ತಪಡಿಸಿದ್ದಾರೆ.
ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡಿದೆ. ಆದ್ರೆ, ಇದ್ರಿಂದಾಗಿ ತೀವ್ರತರವಾಗಿ ಸಮಸ್ಯೆಗಳಾಗಿಲ್ಲ. ಆದರೂ ಆಸ್ಪತ್ರೆಗಳನ್ನು ಸಜ್ಜುಗೊಳಿಸಿಕೊಳ್ಳೋಣ. ಒಂದು ವೇಳೆ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೂ, ಅದನ್ನು ನಿಭಾಯಿಸಲು ಮೊದಲ ವ್ಯವಸ್ಥೆ ಮಾಡಿಕೊಳ್ಳೋಣ. ಈ ಮೂಲಕ ಕೊರೊನಾವನ್ನು ಎದುರಿಸೋಣ ಎಂದು ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ.