ನಕಲಿ ಅಂಕಪಟ್ಟಿ ಮಾರಾಟ ಆರೋಪ; ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಕಚೇರಿಗಳ ಮೇಲೆ ದಾಳಿ
ಬೆಂಗಳೂರು; ದೇಶದ ಹಲವು ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಕಚೇರಿಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯೊಬ್ಬರು ಈ ಸಂಸ್ಥೆಯನ್ನು ಆನ್‌ಲೈನ್ ಮೂಲಕ ಸಂಪರ್ಕ ಮಾಡಿ 40 ಸಾವಿರ ರೂಪಾಯಿ ಕೊಟ್ಟಿದ್ದರು. ಬಿಕಾಂ ಮೊದಲ ಹಾಗೂ ಎರಡನೇ ವರ್ಷ ಅಂಕಪಟ್ಟಿ ಕೊಟ್ಟಿದ್ದ ಸಂಸ್ಥೆಯವರು, ಮೂರನೇ ವರ್ಷದ ಅಂಕಪಟ್ಟಿ ಕೊಡಲು ಮತ್ತಷ್ಟು ಹಣ ಕೇಳಿದ್ದರಂತೆ. ಆಗ ವ್ಯಕ್ತಿ ಅಂಕಪಟ್ಟಿ ಪರಿಶೀಲನೆ ಮಾಡಿದಾಗ ಅದು ನಕಲಿ ಎಂದು ಗೊತ್ತಾಗಿದ್ದು, ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಮಹಾಲಕ್ಷ್ಮಿ ಲೇಔಟ್, ಮಾರತ್ತಹಳ್ಳಿ ಹಾಗೂ ಕೊಡಿಗೇಹಳ್ಳಿಯ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಯ್ತು. ಈ ವೇಳೆ ಶ್ರೀನಿವಾಸ್ ರೆಡ್ಡಿ ಹಾಗೂ ಇತರರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ, ಗುಜರಾತ್, ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಸೇರಿ ಹಲ ವಿವಿಗಳ ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.