ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರ ಸ್ಪರ್ಧೆಗೆ ಹೆಚ್ಚಿದ ಒತ್ತಡ
ಹಾಸನ; ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರ ಸರಿಯಾಗಿ ಸಲ್ಲಿಸದ ಹಿನ್ನೆಲೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ರಾಜ್ಯ ಹೈಕೋರ್ಟ್ ಅನರ್ಹಗೊಳಿಸಿದೆ. ಮೇಲಿನ ಕೋರ್ಟ್‌ನಿಂದ ಇದಕ್ಕೆ ತಡೆಯಾಜ್ಞೆ ತರದಿದ್ದರೆ ಪ್ರಜ್ವಲ್ ರೇವಣ್ಣ ಅವರು ಆರು ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಲು ತಯಾರಿ ನಡೆಸಿದ್ದಾರೆ. ಈ ಬೆನ್ನಲ್ಲೇ ಹಾಸನದ ಬಹುತೇಕ ಜೆಡಿಎಸ್ ಮುಖಂಡರು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೇ ಸ್ಪರ್ಧೆ ಮಾಡಬೇಕು ಎಂದು ಒತ್ತಡ ತರುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು, ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ಹಾಸನ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದ ಪ್ರಜ್ವಲ್ ರೇವಣ್ಣ ವಿರುದ್ಧ ಸುಳ್ಳು ಮಾಹಿತಿ ನೀಡಿದ ಆರೋಪ ಮಾಡಲಾಗಿತ್ತು. ಚುನಾವಣೆ ವೇಳೆ ಆಸ್ತಿ ವಿವರ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿ, ಅಂದು ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ದ ಎ.ಮಂಜು ಹಾಗೂ ಹಾಸನದ ಮತ್ತೊಬ್ಬ ವಕೀಲರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅವರ ಅರ್ಜಿ ಪುರಸ್ಕರಿಸಿರುವ ಕೋರ್ಟ್, ಪ್ರಜ್ವಲ್ ರೇವಣ್ಣ ಅವರ ಸಂಸತ್ ಸ್ಥಾನವನ್ನು ಅವರ್ಹಗೊಳಿಸಿದೆ.
ಹೀಗಾಗಿ ಹಾಸನದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ದೇವೇಗೌಡರೇ ಸ್ಪರ್ಧೆ ಮಾಡಬೇಕೆಂಬ ಒತ್ತಡ ಜಾಸ್ತಿಯಾಗುತ್ತಿದೆ. ಮೊದಲಿನಿಂದಲೂ ದೇವೇಗೌಡರು ಇಲ್ಲೇ ಸ್ಪರ್ಧೆ ಮಾಡುತ್ತಾ ಬಂದಿದ್ದರು. ಈ ಬಾರಿ ಅವರು ಇಲ್ಲೇ ಸ್ಪರ್ಧೆ ಮಾಡಬೇಕು. ಅವರು ಪ್ರಚಾರ ಮಾಡುವುದೇ ಬೇಡ, ನಾವೇ ಅವರನ್ನು ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳುತ್ತಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಜೆಡಿಎಸ್ ಮುಖಂಡರು ದೇವೇಗೌಡರೇ ಸ್ಪರ್ಧೆ ಮಾಡಬೇಕು ಎಂದು ಕೂಗೆಬ್ಬಿಸಿದ್ದಾರೆ. ಇದಕ್ಕೆ ದೇವೇಗೌಡರು ಏನು ಹೇಳುತ್ತಾರೆ ಎಂಬುದು ಇನ್ನೂ ಕುತೂಹಲವಾಗೇ ಉಳಿದಿದೆ.