BengaluruLifestylePolitics

Explainer; ಭಜರಂಗ ದಳ ಏನು ಮಾಡುತ್ತೆ..?; ಆಂಜನೇಯನಿಗೂ ಈ ಸಂಘಟನೆಗೂ ಏನು ಸಂಬಂಧ..?

ಬೆಂಗಳೂರು; ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕರ್ನಾಟಕದಲ್ಲಿ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಸಮಾಜದ ಶಾಂತಿ ಕೆಡಿಸಲು ಹೋದರೆ ಭಜರಂಗದಳ ಸೇರಿ ಯಾವುದೇ ಸಂಘಟನೆಯಾದರೂ ನಿಷೇಧ ಮಾಡುತ್ತೇನೆ ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಬಿಜೆಪಿಯವರು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಹಿಂದೂಗಳನ್ನು ಭಾವನಾತ್ಮಕವಾಗಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಆಂಜನೇಯನಿಗೆ ಅವಮಾನ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ

ಈ ನಡುವೆ ಕಾಂಗ್ರೆಸ್‌ ತನ್ನ ನಿಲುವಿಗೆ ಬದ್ಧವಾಗಿದೆ ಎಂದು ಹೇಳುತ್ತಿದೆ. ಆಂಜನೇಯನ ಹೆಸರು ಅನೇಕ ಜನ ಇಟ್ಟುಕೊಳ್ಳುತ್ತಾರೆ. ಅದರಂತೆ ಸಂಘಟನೆಗೂ ಇಟ್ಟುಕೊಳ್ಳುತ್ತಾರೆ. ದೇವರ ಹೆಸರು ಇಟ್ಟುಕೊಂಡಿದ್ದಾರೆ ಅಂತ ತಪ್ಪು ಮಾಡಿದರೆ ಸುಮ್ಮನೆ ಬಿಡೋದಕ್ಕೆ ಆಗುತ್ತಾ ಅನ್ನೋದು ಕಾಂಗ್ರೆಸ್‌ ಪ್ರಶ್ನೆ. ಆಂಜನೇಯನನ್ನು ನಾವು ಪೂಜೆ ಮಾಡುತ್ತೇವೆ. ಬಿಜೆಪಿಯವರಿಗೆ ಮಾತ್ರವಲ್ಲ, ನಮಗೂ ಆಂಜನೇಯ ದೇವರೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅಷ್ಟೇ ಏಕೆ ಇನ್ನೂ ಸ್ವಲ್ಪ ಮುಂದೆ ಹೋಗಿರುವ ಡಿ.ಕೆ.ಶಿವಕುಮಾರ್‌, ಆಂಜನೇಯನಿಗಾಗಿ ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಆಂಜನೇಯನ ಜನ್ಮಸ್ಥಳದ ಅಭಿವೃದ್ಧಿಗಾಗಿ ಮಂಡಳಿಯನ್ನೇ ರಚನೆ ಮಾಡೋದಾಗಿ ಹೇಳಿದ್ದಾರೆ. ಈ ಮೂಲಕ ಭಜರಂಗದಳದ ನಿಷೇಧದ ಬಗ್ಗೆ ಕಾಂಗ್ರೆಸ್‌ ತಳೆದಿರುವ ನಿಲುವು ಸರಿಯಾಗಿದೆ ಎಂಬುದನ್ನು ಡಿ.ಕೆ.ಶಿವಕುಮಾರ್‌ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದ್ರೆ, ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಮಾತನಾಡುತ್ತಿದ್ದಾರೆ. ಹೋದಲ್ಲೆಲ್ಲಾ ಜೈ ಜೈ ಭಜರಂಗಿ ಎಂದು ಹೇಳುತ್ತಿದ್ದಾರೆ. ಭಜರಂಗದಳ ನಿಷೇಧ ಮಾಡಿದರೆ ಆಂಜನೇನಿಗೆ ಮಾಡುವ ಅವಮಾನ ಎಂದೇ ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಹಾಗೆ ನೋಡಿದರೆ ಎರಡೂ ಪಕ್ಷಗಳೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದೇ ಹೇಳಬಹುದು.

ಅಷ್ಟಕ್ಕೂ ಈ ಭಜರಂಗದಳದ ಕೆಲಸ ಏನು..?

ಭಜರಂಗದಳ ಸಂಘಟನೆ ವಿಶ್ವ ಹಿಂದೂಪರಿಷತ್‌ನ ಅಂಗಸಂಸ್ಥೆ… ಹಿಂದೂ ಪರವಾದಂತಹ ಹೋರಾಟಕ್ಕಾಗಿ ರೂಪಿಸಲಾದ ಒಂದು ಯುವ ಸಂಘಟನೆ ಇದು. ಇದು 1984ರ ಅಕ್ಟೋಬರ್‌ 1 ರಂದು ಉತ್ತರ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂತು. ಈಗ ಈ ಸಂಸ್ಥೆಯಲ್ಲಿ 13 ಲಕ್ಷ ಸದಸ್ಯರಿದ್ದಾರೆ. 8.5 ಲಕ್ಷ ಸದಸ್ಯರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಜರಂಗ ಎಂಬ ದೊವು ಹಿಂದೂ ದೇವರಾದ ಹನುಮಂತನನ್ನು ಪ್ರತಿನಿಧಿಸುತ್ತದೆ. ಈ ಕಾರಣಕ್ಕಾಗಿಯೇ ಭಜರಂಗ ದಳ ನಿಷೇಧ ಮಾಡಿದರೆ ಹನುಮಂತನಿಗೆ ಮಾಡಿದ ಅವಮಾನ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದ್ರೆ ಕಾಂಗ್ರೆಸ್‌ನವರು ಹನುಮಂತನ ಹೆಸರಿಟ್ಟುಕೊಂಡು ತಪ್ಪು ಮಾಡಿದರೆ ಅದನ್ನು ಬೆಂಬಲಿಸಬೇಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಭಜರಂಗದಳದ ಘೋಷವಾಕ್ಯ ‘ಸೇವಾ ಸುರಕ್ಷಾ ಸಂಸ್ಕೃತಿ’ ಅಥವಾ ‘ಸರ್ವಿಸ್, ಸೇಫ್ಟಿ ಮತ್ತು ಕಲ್ಚರ್’. ಗೋ ಹತ್ಯೆಯನ್ನು ತಡೆಯೋದು ಅವರ ಮೂಲ ಉದ್ದೇಶ. ಅಯೋಧ್ಯಾದ ರಾಮಜನ್ಮಭೂಮಿ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸುವುದು, ಕೃಷ್ಣ ಜನ್ಮಭೂಮಿಯಾದ ಮಥುರಾದಲ್ಲಿ ದೇವಸ್ಥಾನವನ್ನು ಮತ್ತು ಕಾಶಿಯಲ್ಲಿ (ವಾರಣಾಸಿ) ಕಾಶಿ ವಿಶ್ವನಾಥ ದೇವಸ್ಥಾನವನ್ನು ನಿರ್ಮಾಣ ಮಾಡುವುದು ಅವರ ಗುರಿಗಳಲ್ಲಿ ಸೇರಿಕೊಂಡಿದೆ. ಇದೀಗ ದೇಶದಲ್ಲಿ ಮುಸ್ಲಿಂ ಹಾಗೂ ಕ್ರಿಶ್ವಿಯನ್ನರ ಜನಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಭಾರತದಲ್ಲಿ ಹಿಂದೂ ಅಸ್ತಿತ್ವ ಉಳಿಸುವುದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಮತಾಂತರ, ಅನ್ಯಧರ್ಮೀಯರ ಜೊತೆ ಮದುವೆ ಮುಂತಾದವುಗಳ ವಿರುದ್ಧವೂ ಈ ಸಂಘಟನೆ ಹೋರಾಡುತ್ತದೆ. ಈ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಳ್ಳಲಾಗುತ್ತದೆ ಎಂಬ ಆರೋಪಗಳಿವೆ.

ಹಲವು ಬಾರಿ ನಿಷೇಧಕ್ಕೆ ಆಗ್ರಹಿಸಲಾಗಿತ್ತು..!

೧. ಕೇಂದ್ರ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಸಹ ಭಜರಂಗದಳ ಮತ್ತು ಶ್ರೀರಾಮಸೇನೆಯನ್ನು ನಿಷೇಧಿಸಬೇಕು ಎಂದು ಈ ಹಿಂದೆ ಆಗ್ರಹಿಸಿದ್ದರು. ಈ ವಿಷಯವಾಗಿ ದೇವೇಗೌಡ ಪ್ರಧಾನಮಂತ್ರಿಗಳಿಗೆ ಒಂದು ಪತ್ರವನ್ನೂ ಸಹ ಬರೆದಿದ್ದರು.

೨. ೨೦೦೮ ಅಕ್ಟೋಬರ್ ೫ರಂದು, ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಯನ್ನು ಕರ್ನಾಟಕದಲ್ಲಿ ಕ್ರಿಶ್ಚಿಯನ್ ಕೇಂದ್ರಗಳ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ನಿಷೇಧಿಸುವಂತೆ ಅಲ್ಪಸಂಖ್ಯಾತ ರಾಷ್ಟ್ರೀಯ ಆಯೋಗಗಳು ಶಿಫಾರಸು ಮಾಡಿದ್ದವು . ಆದಾಗ್ಯೂ ಆಡಳಿತಾರೂಢ ರಾಜ್ಯ ಸರ್ಕಾರ ಈ ಅಲ್ಪಸಂಖ್ಯಾತ ಆಯೋಗದ ಶಿಫಾರಸುಗಳನ್ನು ಮತ್ತು ಸಲಹೆಗಳನ್ನು ಬೆಂಬಲಿಸಲಿಲ್ಲ.

೩. ೨೦೦೮ ಅಕ್ಟೋಬರ್ ೫ರಂದು, ಭಾರತದ ಪ್ರಧಾನ ಮಂತ್ರಿಗಳು ವಿಶೇಷ ಸಂಪುಟ ದರ್ಜೆ ಸಭೆಯನ್ನು ಕರೆಯಲು ನಿಶ್ಚಯಿಸುತ್ತಾರೆ. ಕರ್ನಾಟಕ ಮತ್ತು ಓರಿಸ್ಸಾಗಳಲ್ಲಿ ಕ್ರಿಶ್ಚಿಯನ್ನರ ಮತ್ತು ಅವರ ಧಾರ್ಮಿಕ ಕೇಂದ್ರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿ ಹಿನ್ನೆಲೆಯಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಯನ್ನು ನಿಷೇಧಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು.

Share Post