Exclusive; ನಿಜವಾಗಲೂ ಬಿಜೆಪಿಗೆ ವಾಪಸ್ಸಾಗ್ತಾರಾ ಶೆಟ್ಟರ್..?; ಯಾಕೆ ಬಿಜೆಪಿ ನಾಯಕರ ಸರ್ಕಸ್..?
ಹುಬ್ಬಳ್ಳಿ; ದಶಕಗಳ ಕಾಲ ಬಿಜೆಪಿಗಾಗಿ ದುಡಿದವರು ಜಗದೀಶ್ ಶೆಟ್ಟರ್. ಉತ್ತರ ಕರ್ನಾಟಕದ ಭಾಗದಲ್ಲಿ ಅವರ ಪ್ರಭಾವ ಎಷ್ಟಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಹಾಗಂತ ಬಿಜೆಪಿ ಪಕ್ಷ ಕೂಡಾ ಅವರಿಗೆ ಅಧಿಕಾರ ಕೊಡದೇ ಇರಲಿಲ್ಲ. ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿತ್ತು. ಆದ್ರೆ ಅದ್ಯಾಕೋ ಏನೋ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಈ ಹಿರಿಯ ಬಿಜೆಪಿ ನಾಯಕನನ್ನು ಬಿಜೆಪಿ ಹೈಕಮಾಂಡ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದ ಶೆಟ್ಟರ್ ಗೆ ಹೈಕಮಾಂಡ್ ಬಗ್ಗಲೇ ಇಲ್ಲ. ಹೋದರೆ ಹೋಗಲಿ ಎಂದು ಬಿಟ್ಟುಬಿಟ್ಟಿತ್ತು. ಅವಮಾನದೊಂದಿಗೇ ಶೆಟ್ಟರ್‌ಗೆ ಕಾಂಗ್ರೆಸ್ ಬಂದರು. ಸೋತರು ಕೂಡಾ..
ಅಂದು ಬಿಜೆಪಿಗೆ ಶೆಟ್ಟರ್ ಬೇಕಿರಲಿಲ್ಲ. ಆದ್ರೆ ಮತ್ತೆ ಬಿಜೆಪಿಗೆ ಅವರು ಬೇಕಾಗಿದ್ದಾರೆ. ಯಾಕಂದ್ರೆ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಶೆಟ್ಟರ್ ಪ್ರಭಾವ ಇದೆ. ಅವರು ಬಿಜೆಪಿಯಲ್ಲಿದ್ದರೆ, ಅವರ ಅಭ್ಯರ್ಥಿಗಳು ಗೆಲ್ಲೋದು ಸುಲಭವಾಗುತ್ತದೆ. ಈ ಕಾರಣಕ್ಕಾಗಿಯೇ ಶೆಟ್ಟರ್‌ರನ್ನು ಮತ್ತೆ ಬಿಜೆಪಿಗೆ ಸೆಳೆಯೋದಕ್ಕೆ ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ರಮೇಶ್ ಜಾರಕಿಹೊಳಿ ಮೂಲಕ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಆದ್ರೆ ಶೆಟ್ಟರ್ ಮಾತ್ರ ಇದುವರೆಗೂ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
ಶೆಟ್ಟರ್ ಅವರು ಕಾಂಗ್ರೆಸ್‌ನೊಂದಿಗೆ ಈಗ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಮತ್ತೆ ಬಿಜೆಪಿಗೆ ಹೋಗೋದಿಲ್ಲ ಅನ್ನೋ ಮಾತನ್ನು ಹಲವು ಬಾರಿ ಸ್ಪಷ್ಟವಾಗಿ ಅವರು ಹೇಳಿದ್ದೂ ಇದೆ. ಇದರ ನಡುವೆಯೂ ಶೆಟ್ಟರ್ ಬಿಜೆಪಿಗೆ ಬರಬಹುದು ಅನ್ನೋ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ. ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ತೆಗೆದುಕೊಂಡ ನಿಲುವು ಎಲ್ಲೋ ಒಂದು ಕಡೆ ಶೆಟ್ಟರ್‌ಗೆ ಇಷ್ಟವಾಗಿಲ್ಲ ಅನಿಸುತ್ತೆ. ಹೀಗಾಗಿ, ಶೆಟ್ಟರ್ ಕಾಂಗ್ರೆಸ್‌ಗೆ ಒಗ್ಗಿಕೊಳ್ಳುವುದಿಲ್ಲ, ಬಿಜೆಪಿಗೆ ಬರ್ತಾರೆ ಅನ್ನೋ ಆಶಾಭಾವನೆಯಲ್ಲಿ ಬಿಜೆಪಿಗರಿದ್ದಾರೆ. ಅದಕ್ಕಾಗಿ ಅವರ ಮನವೊಲಿಸುವ ಪ್ರಯತ್ನ ತೆರೆಮರೆಯಲ್ಲಿ ಸತತವಾಗಿ ನಡೆಯುತ್ತಿದೆ. ಇದರ ಜೊತೆಗೆ ಸಾಧ್ಯವಾದರೆ ಲಕ್ಷ್ಮಣ ಸವದಿ ಅವರನ್ನು ಸೆಳೆಯಬಹುದೇ ಎಂಬುದರ ಬಗ್ಗೆಯೂ ಪ್ರಯತ್ನಗಳು ನಡೆಯುತ್ತಿವೆ. ಆದ್ರೆ ಲಕ್ಷ್ಮಣ ಸವದಿ ಕೂಡಾ ಈ ಬಗ್ಗೆ ಯಾವುದೇ ನಿಲುವನ್ನು ವ್ಯಕ್ತಪಡಿಸಿಲ್ಲ. ಅವರೂ ಕೂಡಾ ಕಾಂಗ್ರೆಸ್‌ನೊಂದಿಗೆ ಸಕ್ರಿಯವಾಗಿದ್ದಾರೆ. ಇದರ ನಡುವೆಯೂ ಪ್ರಯತ್ನಗಳು ಜೋರಾಗಿ ನಡೆದಿದೆ.
ವಿಧಾನಸಭಾ ಚುನಾವಣೆ ಸಮಯದಲ್ಲಿ ಮುನಿಸಿಕೊಂಡಿದ್ದ ಜಗದೀಶ ಶೆಟ್ಟರ್ ಮನವೊಲಿಸಲು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಖುದ್ದಾಗಿ ಪ್ರಯತ್ನ ಮಾಡಿದ್ದರು. ಅದಕ್ಕೆ ಶೆಟ್ಟರ್ ಬಗ್ಗಿರಲಿಲ್ಲ. ಈಗ ರಾಜ್ಯ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಶೆಟ್ಟರ್ ಸೊಪ್ಪು ಹಾಕುವುದು ಡೌಟು. ಯಾಕಂದ್ರೆ, ವಿಧಾನಸಭಾ ಚುನಾವಣೆ ಸಮಯದಲ್ಲಿ ಅವರನ್ನು ನಡೆಸಿಕೊಂಡು ಬಗೆ ಅವರಿಗೆ ಗೊತ್ತಿದೆ.
ಆದರೂ ಶೆಟ್ಟರ್ ಬಿಜೆಪಿಗೆ ಹೋದರೆ ಅಚ್ಚರಿ ಇಲ್ಲ. ಹೈಕಮಾಂಡ್ ನಾಯಕರೇ ಖುದ್ದಾಗಿ ಮಾತನಾಡಿದರೆ ಶೆಟ್ಟರ್ ಬಗ್ಗಲೂ ಬಹುದು. ಆದ್ರೆ ಪಕ್ಷಕ್ಕೆ ವಾಪಸಾದರೆ ಅವರ ನೀಡುವ ಜವಾಬ್ದಾರಿ, ಅವರಿಗೆ ನೀಡುವ ಪ್ರಾಮುಖ್ಯತೆ ಏನು ಎಂಬುದರ ಮೇಲೆ ಶೆಟ್ಟರ್ ನಿರ್ಧಾರ ಪ್ರಕಟ ಮಾಡಬಹುದು.
ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಶೆಟ್ಟರ್ ಅವರು ಪಕ್ಷಕ್ಕೆ ಬಂದ ಮೇಲೆ ಕಾಂಗ್ರೆಸ್‌ನೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಅವರು ಯಾವತ್ತೂ ಪಕ್ಷ ಬಿಡುವ ರೀತಿಯಲ್ಲಿ ಮಾತನಾಡಿಲ್ಲ. ಅವರು ಸ್ಪಷ್ಟವಾಗಿ ಈ ಬಗ್ಗೆ ಹೇಳಿಯೂ ಇದ್ದಾರೆ. ಕಾಂಗ್ರೆಸ್‌ನೋಂದಿಗೇ ಇರುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದೂ ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶೋಭಾ ಕರಂದ್ಲಾಜೆ
ರಮೇಶ್ ಜಾರಕಿಹೊಳಿ