ಹರ್ಷ ಹತ್ಯೆ & ರಾಷ್ಟ್ರಧ್ವಜ ವಿಚಾರ; ರಾಜ್ಯಪಾಲರ ಭೇಟಿಯಾಗಲಿರುವ ಈಶ್ವರಪ್ಪ
ಬೆಂಗಳೂರು: ರಾಷ್ಟ್ರಧ್ವಜದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ನೀಡಿರುವ ಹೇಳಿಕೆ ಎರಡು ಸದನಗಳಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಇನ್ನು ಶಿವಮೊಗ್ಗದಲ್ಲಿ ನಿನ್ನೆ ನಡೆದ ಘಟನೆ ಹಾಗೂ ಈಶ್ವರಪ್ಪ ಅವರು ನಿನ್ನೆ ನೀಡಿದ ಹೇಳಿಕೆಗಳ ವಿರುದ್ಧವೂ ಕಾಂಗ್ರೆಸ್ ಪಕ್ಷ ಸಿಡಿದೆದ್ದಿದೆ. ಹೀಗಿರುವಾಗಲೇ ಸಚಿವ ಈಶ್ವರಪ್ಪ ಅವರು ರಾಜ್ಯಪಾಲರ ಭೇಟಿ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸಚಿವ ಈಶ್ವರಪ್ಪ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ರಾಷ್ಟ್ರಧ್ವಜ ಹೇಳಿಕೆ ವಿಚಾರ ಹಾಗೂ ಶಿವಮೊಗ್ಗ ಹರ್ಷ ಹತ್ಯೆ ಮತ್ತು ಅನಂತರ ನಡೆದ ಘಟನೆಗಳ ಬಗ್ಗೆ ಈಶ್ವರಪ್ಪ ಅವರು ರಾಜ್ಯಪಾಲರಿಗೆ ವಿವರಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ನಾಯಕರು ಈಶ್ವರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ನಾಯಕರು ರಾಜ್ಯಪಾಲರ ಭೇಟಿಗೂ ಮೊದಲೇ ಈಶ್ವರಪ್ಪ ಅವರು ರಾಜ್ಯಪಾಲರನ್ನು ಭೇಟಿ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.