BengaluruPolitics

ಗೃಹಲಕ್ಷ್ಮೀ ಯೋಜನೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದ್ದೇಕೆ ಗೊತ್ತಾ..?

ಬೆಂಗಳೂರು; ಆಗಸ್ಟ್‌ 30ರಂದಷ್ಟೇ ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಯಿತು. ಅದ್ದೂರಿ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಒಂದಷ್ಟು ಮಹಿಳೆಯರಿಗೆ ಹಣವನ್ನು ಟ್ರಾನ್ಸ್‌ಫರ್‌ ಮಾಡಲಾಯಿತು. ಸದ್ಯ 1 ಕೋಟಿ 13 ಲಕ್ಷ ಮಹಿಳೆಯರು ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲರ ಖಾತೆಗಳಿಗೂ ಹಣ ಜಮೆಯಾಗುತ್ತಿದೆ. 

ಅಂದಹಾಗೆ, ಇನ್ನೂ ಸಾಕಷ್ಟು ಮಹಿಳೆಯರು ನೋಂದಣಿ ಮಾಡಿಸಬೇಕಿದೆ. ಆದ್ರೆ ಯೋಜನೆ ಜಾರಿ ನಂತರ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಹೇಗೆ ನೋಂದಣಿ ಮಾಡಿಸೋದು ಎಂಬುದರ ಬಗ್ಗೆ ಮಹಿಳೆಯರು ಚಿಂತೆಗೀಡಾಗಿದ್ದಾರೆ. ಇನ್ನು ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. ನೋಂದಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಅಷ್ಟೇ. ಶೀಘ್ರದಲ್ಲೇ ನೋಂದಣಿ ಪ್ರಕ್ರಿಯೆ ಪುನಾರಂಭ ಮಾಡುತ್ತೇವೆ ಅಂತ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಡಿ.ಕೆ.ಶಿವಕುಮಾರ್‌,  ಈಗಾಗಲೇ ನೋಂದಣಿ ಮಾಡಿಕೊಂಡವರ ಖಾತೆಗಳಿಗೆ 2 ಸಾವಿರ ರೂಪಾಯಿ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದೇ ವೇಳೆ ಹೊಸ ನೋಂದಣಿಯೂ ಆದರೆ ಗೊಂದಲ ಉಂಟಾಗುತ್ತದೆ. ಹೀಗಾಗಿ ಗೊಂದಲ ಬೇಡ ಎಂಬ ಕಾರಣಕ್ಕಾಗಿ ನೋಂದಣಿ ಪ್ರಕ್ರಿಗೆ ಸ್ಥಗಿತ ಮಾಡಲಾಗಿದೆ. ಈಗಾಗಲೇ ನೋಂದಾಯಿತರಾಗಿರುವ ಮಹಿಳೆಯರ ಖಾತೆಗಳಿಗೆ ಪೂರ್ತಿ ಹಣ ಜಮೆಯಾದ ನಂತರ, ಮತ್ತೆ ನೋಂದಣಿ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ರಾಜ್ಯದಲ್ಲಿರುವ  1.28 ಕೋಟಿ ಫಲಾನುಭವಿಗಳ ಪೈಕಿ 1.13 ಕೋಟಿ ನೋಂದಣಿಯಾಗಿದೆ. 17 ಲಕ್ಷ ಫಲಾನುಭವಿಗಳು ಬ್ಯಾಂಕ್ ಅಕೌಂಟ್, ಕೆವೈಸಿ ಅಪ್ಡೇಟ್ ಮಾಡಿಸಿಲ್ಲ. ಹೀಗಾಗಿ ವಿಳಂಬವಾಗಿದೆ ಎಂದು ಡಿಕೆಶಿ ಹೇಳಿದರು.

Share Post