Bengaluru

ಕೊವಿಡ್‌ನಿಂದ ನರಳಿದವರಿಗೆ ಬಜೆಟ್‌ ಸಹಾಯವಾಗಲಿ; ಡಿ.ಕೆ.ಶಿವಕುಮಾರ್‌

ಬೆಂಗಳೂರು: ನಾಳೆ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಿದ್ದು, ಕೋವಿಡ್ ನಿಂದ ನರಳಿರುವ ಜನರಿಗೆ ಸರ್ಕಾರ ಯಾವ ರೀತಿ ಸಹಾಯ ಮಾಡಲಿದೆ ಎಂದು ನೋಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಜನ ಕೋವಿಡ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ.  ಅದರಲ್ಲಿ ಕೆಲವರಿಗೆ ಮಾತ್ರ 1 ಲಕ್ಷ ರೂ. ಪರಿಹಾರ ನೀಡಲು ಸರಕಾರ ಮುಂದಾಗಿದೆ. ಸರ್ಕಾರ ಈ ಹಿಂದೆ 4 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ನ್ಯಾಯಾಲಯ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೋವಿಡ್ ನಿಂದ ಸತ್ತವರಿಗೆ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶನ ನೀಡಿತ್ತು. ಹೀಗಾಗಿ ಸತ್ತವರ ಕುಟುಂಬಕ್ಕೆ 4 ಲಕ್ಷ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

ಖಾಸಗಿ ಆಸ್ಪತ್ರೆ ಸೇರಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವವರಿಗೆ ಪರಿಹಾರ ಕೊಡಬೇಕು. ರೈತರಿಗೆ, ಕಾರ್ಮಿಕರಿಗೆ ಆಗಿರುವ ನಷ್ಟ ಭರಿಸಬೇಕು. ವೃತ್ತಿ ಕಳೆದುಕೊಂಡವರಿಗೆ ಸರ್ಕಾರ ಈ ಬಜೆಟ್ ನಲ್ಲಿ ಹಣ ಒದಗಿಸುವ ನಿರೀಕ್ಷೆ ನಮ್ಮದಾಗಿದೆ. ಸಿಮೆಂಟ್ ಹಾಗೂ ಕಬ್ಬಿಣದ ಬೆಲೆಗಳು ಏರಿಕೆಯಾಗಿದ್ದು, ಕೇಂದ್ರ ಸರ್ಕಾರ ಕಬ್ಬಿಣ ಹಾಗೂ ಸೀಮೆಂಟ್ ವ್ಯಾಪಾರಿಗಳ ಲಾಭಿಗೆ ಮಣಿಯುತ್ತಿರುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ಕಬ್ಬಿಣದ ಬೆಲೆ 30, 35 ಸಾವಿರಕ್ಕೆ ಇಳಿಯಬೇಕು. ಸೀಮೆಂಟ್ ಬೆಲೆ ಕೂಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

Share Post