ವಿಪಕ್ಷಗಳ ಮಹಾಮೈತ್ರಿ ಸಭೆಯನ್ನೂ ಟಾರ್ಗೆಟ್ ಮಾಡಿದ್ದರಾ ಶಂಕಿತ ಉಗ್ರರು..?
ಬೆಂಗಳೂರು; ಸಿಕ್ಕಿಬಿದ್ದಿರುವ ಶಂಕಿತ ಉಗ್ರರು ವಿಪಕ್ಷಗಳ ಮಹಾಮೈತ್ರಿ ಸಭೆಯನ್ನೂ ಟಾರ್ಗೆಟ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ 26 ಪಕ್ಷಗಳ ನಾಯಕರು ಸೋಮವಾರ ಹಾಗೂ ಮಂಗಳವಾರ ಸಭೆ ನಡೆಸಿದ್ದರು. ಶಂಕಿತ ಉಗ್ರರು ಈ ಸಭೆಯನ್ನು ಟಾರ್ಗೆಟ್ ಮಾಡಿದ್ದರು ಎಂಬ ಮಾಹಿತಿಗಳೂ ಇವೆ. ಆದ್ರೆ, ಸಭೆಗೆ ಭಾರೀ ಭದ್ರತೆ ಒದಗಿಸಿದ್ದರಿಂದ ಶಂಕಿತರು ದಾಳಿ ಮಾಡುವುದರಿಂದ ಹಿಂದೆ ಸರಿದಿದ್ದರು ಎನ್ನಲಾಗ್ತಿದೆ.
ವಿಪಕ್ಷಗಳ ಸಭೆ ವೇಳೆ ದಾಳಿ ನಡೆಸುವ ಸಂಚು ವಿಫಲವಾಗಿದ್ದರಿಂದ ಬೇರೆ ಕಡೆ ಜನನಿಬಿಡ ಪ್ರದೇಶದಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಸ್ಫೋಟಕ್ಕೆ ಬೇಕಾದ ಎಲ್ಲಾ ಸ್ಫೋಟಕಗಳನ್ನೂ ತರಿಸಿಕೊಂಡಿದ್ದ ಶಂಕಿತರು, ಇನ್ನೆರಡು ದಿನಗಳಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ದಾಳಿ ನಡೆಸೋದಕ್ಕೆ ಸ್ಕೆಚ್ ಹಾಕುತ್ತಿದ್ದರು ಎನ್ನಲಾಗಿದೆ. ಅಷ್ಟರಲ್ಲಿ ಖಚಿತ ಮಾಹಿತಿ ಪಡೆದ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಹೇಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್ ರಬ್ಬಾನಿ ಎಂಬುವವರನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ. ಇವರು ಮನೆಯೊಂದರಲ್ಲಿ ಕುಳಿತು ವಿಧ್ವಂಸಕ ಕೃತ್ಯಕ್ಕೆ ಸಂಚು ಮಾಡುತ್ತಿದ್ದಾಗಲೇ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.