ಮೆಟ್ರೋ ಸ್ಟೇಷನ್ ಬಳಿ ಹೊತ್ತಿ ಉರಿದ ಕ್ರೇನ್
ಬೆಂಗಳೂರು; ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಕಾರೊಂದು ಇದ್ದಕ್ಕಿದ್ದಂತೆ ಹೊತ್ತಿ ಉರಿದಿತ್ತು. ಇದೀಗ ಕ್ರೇನ್ ಒಂದು ಅದೇ ರೀತಿ ಹೊತ್ತಿ ಉರಿದಿದೆ. ನೋಡ ನೋಡುತ್ತಿದ್ದಂತೆ ಸುಟ್ಟು ಕರಕಲಾಗಿದೆ. ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಕಳೆದ ರಾತ್ರಿ ಈ ದುರ್ಘಟನೆ ನಡೆದಿದೆ.
ಕ್ರೇನ್ ವರ್ತೂರಿನಿಂದ ಬಿಡದಿಗೆ ಹೋಗುತ್ತಿತ್ತು. ಅದು ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಬಂದಾಗ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಅದು ಧಗಧಗ ಉರಿಯತೊಡಗಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ.
ಕ್ರೇನ್‌ನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಇಬ್ಬರೂ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹತ್ತಿರದಲ್ಲೇ ಎರಡು ಪೆಟ್ರೋಲ್ ಬಂಕ್‌ಗಳಿದ್ದವು. ಅವಕ್ಕೆ ಬೆಂಕಿ ಹರಡುವ ಸಾಧ್ಯತೆ ಇತ್ತು. ಆದ್ರೆ, ಅಗ್ನಿಶಾಮಕ ಸಿಬ್ಬಂದಿ ಸಮಯಪ್ರಜ್ಞೆಯಿಂದ ಬೆಂಕಿಯನ್ನು ಬೇರೆಡೆ ಹರಡದಂತೆ ನೋಡಿಕೊಳ್ಳಲಾಗಿದೆ.