ಕೆ.ಹೆಚ್.ಮುನಿಯಪ್ಪ ನಿವಾಸಕ್ಕೆ ವೀರಪ್ಪ ಮೊಯ್ಲಿ ಭೇಟಿ; ಏನು ಈ ಮೀಟಿಂಗ್ ಗುಟ್ಟು..?
ಬೆಂಗಳೂರು; ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸೋತ ಮೇಲೆ ಕ್ಷೇತ್ರದಿಂದ ದೂರವೇ ಉಳಿದಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಕೆಲ ತಿಂಗಳುಗಳಿಂದ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ನನಗೇ ಕಾಂಗ್ರೆಸ್ ಟಿಕೆಟ್ ಸಿಗುತ್ತೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ನಡುವೆ ಅವರು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ಕೆ.ಹೆಚ್.ಮುನಿಯಪ್ಪ ಅವರ ಮನೆಗೆ ಭೇಟಿ ನೀಡಿ ಕುತೂಹಲಕ್ಕೆ ಕಾರಣರಾಗಿದ್ದಾರೆ.
ಇಂದು ಬೆಳಗ್ಗೆ ಉಪಾಹಾರಕ್ಕೆ ವೀರಪ್ಪ ಮೊಯ್ಲಿಯವರು ಕೆ.ಹೆಚ್.ಮುನಿಯಪ್ಪ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಅವರ ಕೆಲ ಬೆಂಬಲಿಗರೂ ಇದ್ದರು. ಉಪಾಹಾರ ಸೇವನೆ ಬಳಿಕ ಕೆಲಕಾಲ ಮಾತುಕತೆ ಕೂಡಾ ನಡೆಸಲಾಗಿದೆ. ಇಬ್ಬರು ಹಿರಿಯ ನಾಯಕರು ಸೇರಿ ಏನು ಮಾತನಾಡಿದರು ಎಂಬುದರ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ.
ಯಾಕಂದ್ರೆ ಕೆ.ಹೆಚ್.ಮುನಿಯಪ್ಪ ಹಾಗೂ ವೀರಪ್ಪ ಮೊಯ್ಲಿ ಇಬ್ಬರೂ ಕಾಂಗ್ರೆಸ್ ಹೈಕಮಾಂಡ್‌ಗೆ ಹತ್ತಿರವಿರುವವರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರಿಗೂ ಇವರು ಸನಿಹರು. ಹೀಗಾಗಿ, ಈ ಹಿರಿಯರ ಭೇಟಿ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿವೆ.