ಹಲಾಲ್ ಪದ್ಧತಿ ಸಾವಿರಾರು ವರ್ಷಗಳಿಂದ ಇದೆ; ಸಿದ್ದರಾಮಯ್ಯ
ಬೆಂಗಳೂರು; ಹಲಾಲ್ ಪದ್ಧತಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಹಲಾಲ್ ಮಾಡಿದ ಮಾಂಸವನ್ನು ನಾವು ಕೂಡಾ ಸಾವಿರಾರು ವರ್ಷಗಳಿಂದ ನಾವು ಕೂಡಾ ತಿನ್ನುತ್ತಿದ್ದೇವೆ. ಅವರವರ ನಂಬಿಕೆ, ನಂಬಿಕೆ ಅವರವರದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ವಿಚಾರವನ್ನು ಮುಚ್ಚಿ ಹಾಕಲು ಕೋಮುವಾದವನ್ನು ಮುಂದೆ ತರಲಾಗುತ್ತಿದೆ ಎಂದು ಹೇಳಿದರು. ಸಮಾಜದ ಸಾಮರಸ್ಯ ಹಾಳು ಮಾಡುವ ನಿಮಗೆ ಮನುಷ್ಯತ್ವ ಇದೆಯಾ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಶ್ನೆ ಮಾಡಿದರು.
ಇನ್ನು ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಎಲ್ಲ ವರ್ಗದ ಜನರ ಮೇಲೆ ಗದಾಪ್ರಹಾರ ಮಾಡುತ್ತಿದೆ. ನಾವು ಕೇವಲ ಪೆಟ್ರೋಲ್ ಡೀಸೆಲ್, ಅಡುಗೆ ಅನಿಲದ ವಿಚಾರವಾಗಿ ಮಾತನಾಡುತ್ತಿದ್ದು, ಕಳೆದ 11 ದಿನಗಳಿಂದ ಇವುಗಳ ಬೆಲೆ ಏರುತ್ತಲೇ ಇದೆ ಎಂದು ಆರೋಪಿಸಿದರು.
ರೈತರು, ಬಡವರು, ವ್ಯಾಪಾರಸ್ಥರು, ಮಧ್ಯಮ ವರ್ಗದವರು, ಸಾಮಾನ್ಯ ಜನರ ಮೇಲೆ ಈ ಗದಾಪ್ರಹಾರ ನಡೆದುಕೊಂಡು ಬಂದಿದೆ. ತೆರಿಗೆ ಹೆಸರಲ್ಲಿ ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ. ಅಚ್ಛೇದಿನದ ಮಾತು ಕೊಟ್ಟಿದ್ದ ಮೋದಿ ಅವರು ಬೆಲೆ ಏರಿಕೆಯಿಂದ ನಿತ್ಯ ನರಕಯಾತನೆ ನೀಡುತ್ತಿದ್ದಾರೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು ಮೋದಿ, ವೆಚ್ಚವನ್ನು ಮಾತ್ರ ಡಬಲ್ ಮಾಡಿದ್ದಾರೆ. ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಮ್ಮ ರಾಜ್ಯದಿಂದ ಕೇಂದ್ರ ಕೃಷಿ ಸಚಿವರಿದ್ದರೂ ರಾಗಿ, ಭತ್ತ, ಜೋಳ, ತೊಗರಿ ಬೆಂಬಲ ಬೆಲೆ ನೀಡುತ್ತಿಲ್ಲ. ಖರೀದಿಯಲ್ಲೂ ಮಿತಿ ಹೇರಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.