ಹಾಸನದಲ್ಲಿ ತಲೆಮರೆಸಿಕೊಂಡಿದ್ದ ತಮಿಳುನಾಡು ಮಾಜಿ ಸಚಿವ ರಾಜೇಂದ್ರ ಬಾಲಾಜಿ ಬಂಧನ
ಬೆಂಗಳೂರು: ಕೆಲಸ ಕೊಡಿಸುವುದಾಗಿ ವಂಚನೆ ಸೇರಿ ಎರಡು ಕೇಸ್‌ಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ತಮಿಳುನಾಡಿನ ಮಾಜಿ ಸಚಿವ ರಾಜೇಂದ್ರ ಬಾಲಾಜಿ ಅವರನ್ನು ಕರ್ನಾಟಕದ ಹಾಸನದಲ್ಲಿ ಬಂಧಿಸಲಾಗಿದೆ. ರಾಜೇಂದ್ರ ಬಾಲಾಜಿಯವರು ತಮಿಳುನಾಡು ಸರ್ಕಾರದಲ್ಲಿ ಆಗಸ್ಟ್ 2016 ರಿಂದ ಮೇ 2021ರವರೆಗೆ ಹಾಲು ಮತ್ತು ಡೈರಿ ಅಭಿವೃದ್ಧಿ ಇಲಾಖೆ ಮಂತ್ರಿಯಾಗಿದ್ದರು. ಈ ವೇಳೆ ಹಲವರಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ಹೇಳಿ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಇದರ ಜೊತೆಗೆ ಇದೇ ಕೇಸ್‌ನಲ್ಲಿ ಆರೋಪಿಯಾಗಿರುವ ನಲ್ಲತಂಬಿ ಎಂಬುವವರು ಕೂಡಾ ರಾಜೇಂದ್ರ ಬಾಲಾಜಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇದರಲ್ಲಿ, ಹಣ ಸಂಗ್ರಹದ ಮಾಡುವುದಕ್ಕೆ ನನ್ನನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ರಾಜೇಂದ್ರ ಬಾಲಾಜಿ ವಿರುದ್ಧ ನಲ್ಲತಂಬಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಕೇಸ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ರಾಜೇಂದ್ರ ಬಾಲಾಜಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಎರಡು ವಾರದ ಹಿಂದೆ ಕೋರ್ಟ್ ಈ ಅರ್ಜಿಯನ್ನು ವಜಾ ಮಾಡಿತ್ತು.
ಈ ಹಿನ್ನೆಲೆಯಲ್ಲಿ ರಾಜೇಂದ್ರ ಬಾಲಾಜಿ ಅವರು, ತಲೆಮರೆಸಿಕೊಂಡಿದ್ದರು. ಕೆಲದ ದಿನಗಳಿಂದ ತಮಿಳುನಾಡು ಪೊಲೀಸರು ರಾಜೇಂದ್ರ ಬಾಲಾಜಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ರಾಜೇಂದ್ರ ಬಾಲಾಜಿ ಹಾಸನದಲ್ಲಿ ಸಿಕ್ಕಿಬಿದ್ದಿದ್ದಾರೆ.