BengaluruCrime

ಅಪಾರ್ಟ್‌ಮೆಂಟ್‌ ಮೇಲಿಂದ ಬಿದ್ದು 27 ವರ್ಷದ ಮಹಿಳೆ ಆತ್ಮಹತ್ಯೆ

ಬೆಂಗಳೂರು; ಎರಡು ವರ್ಷದಿಂದಷ್ಟೇ ವಿವಾಹವಾಗಿದ್ದ ಮಹಿಳೆ ಅಪಾರ್ಟ್‌ಮೆಂಟ್‌ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಲಹಂಕ ಬಳಿಯ ನಾಗದೇವನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಉತ್ತರ ಪ್ರದೇಶದ ಲಕ್ನೋ ಮೂಲದ ಅಮೃತಾ ಶರ್ಮಾ (27) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ.

ಕಳೆದ ರಾತ್ರಿ ಅಮೃತ ಶರ್ಮಾ ಅಪಾರ್ಟ್‌ಮೆಂಟ್‌ನ ಹತ್ತನೇ ಮಹಡಿಯ ಮನೆಯ ಅಡುಗೆ ಕೋಣೆಯ ಬಾಲ್ಕನಿಯಲ್ಲಿ ನಿಂತಿದ್ದಳು. ರಾತ್ರಿ ಹತ್ತು ಗಂಟೆ ಸುಮಾರಿಗೆ ಅಲ್ಲಿಂದಲೇ ಆಕೆ ಕೆಳಕ್ಕೆ ಹಾರಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಮಹಿಳೆಯ ತಂದೆ ಇತ್ತೀಚೆಗೆ ಸಾವನ್ನಪ್ಪಿದ್ದರು. ಇದರಿಂದಾಗಿ ಅಮೃತಾ ಶರ್ಮಾ ತೀವ್ರವಾಗಿ ನೊಂದಿದ್ದಳು. ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ತಿಳಿದುಬಂದಿದೆ.

ಮೃತ ದೇಹವನ್ನು ಅಂಬೇಡ್ಕರ್ ಅಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post