ಹುಚ್ಚ ವೆಂಕಟ್ ಹೆಸರಲ್ಲಿ ಬಾಂಬ್ ಬೆದರಿಕೆ ಇ-ಮೇಲ್; ಡಿ.ಕೆ.ಶಿವಕುಮಾರ್
ಬೆಂಗಳೂರು; ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್‌ವ್ಯೂ ಪಬ್ಲಿಕ್ ಶಾಲೆಗೆ ಹುಚ್ಚ ವೆಂಕಟ್ ಹೆಸರಿನಲ್ಲಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ ಎಂದು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಶಾಲೆಗೆ ಬಾಂಬ್ ಬೆದಿಕೆ ಇ-ಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಇ-ಮೇಲ್ ಬಗ್ಗೆ ಮಾಹಿತಿ ನೀಡಿದರು.
ಭಾನುವಾರ ರಾತ್ರಿ ಇ-ಮೇಲ್ ಮೂಲಕ ಬೆದರಿಕೆ ಬಂದಿತ್ತು. ಸೋಮವಾರ ಬೆಳಿಗ್ಗೆ ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗೆ ಬಂದ ಬಳಿಕ ವಿಷಯ ಗೊತ್ತಾಯಿತು. ಅಷ್ಟರಲ್ಲಾಗಲೇ ಮಕ್ಕಳು ಶಾಲೆಗೆ ಬಂದಿದ್ದರು. ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಪೊಲೀಸರು ತಪಾಸಣೆ ನಡೆಸಿದರು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ತಪಾಸಣೆ ಅಂತ್ಯವಾಗಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ಇ-ಮೇಲ್ ಜಾಡು ಹಿಡಿದು ತನಿಖೆ ಶುರು ಮಾಡಿದ್ದಾರೆ.