CrimeNational

ರೈಲಿಗೆ ಬೆಂಕಿ ಹಚ್ಚಿದ ಉದ್ಯೋಗಾಕಾಂಕ್ಷಿಗಳು:ಪರಿಸ್ಥಿತಿ ಉದ್ವಿಗ್ನ

ಬಿಹಾರ: ರೈಲ್ವೇ ನೇಮಕಾತಿ ಮಂಡಳಿಯ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಬಿಹಾರದ ಹಲವಾರು ಸ್ಥಳಗಳಲ್ಲಿ ಉದ್ಯೋಗಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಮಂಗಳವಾರ ಮತ್ತು ಬುಧವಾರ ಹಿಂಸಾಚಾರಕ್ಕೆ ತಿರುಗಿತ್ತು. ಹತ್ತಾರು ಪ್ರತಿಭಟನಾಕಾರರು ಬಿಹಾರದ ಗಯಾ, ಪಾಟ್ನಾ, ನಳಂದಾ, ನವಾಡ, ಆರಾ ಮತ್ತು ಹಾಜಿಪುರ ಪ್ರದೇಶಗಳಲ್ಲಿನ ರೈಲು ನಿಲ್ದಾಣಗಳಲ್ಲಿ ಮೆರವಣಿಗೆ ಮಾಡಿದರು.

ಗಯಾದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಸುಮಾರು 200 ಅಭ್ಯರ್ಥಿಗಳು ಗಯಾ ರೈಲು ನಿಲ್ದಾಣವನ್ನು ತಲುಪಿ ನಿಲ್ಲಿಸಿದ ರೈಲಿಗೆ ಬೆಂಕಿ ಹಚ್ಚಿದರು. ಎಚ್ಚೆತ್ತ ರೈಲ್ವೆ ಪೊಲೀಸ್‌ ಹಾಗೂ ಗಯಾ ಜಿಲ್ಲಾ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರು.  ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ರು. ಪರಿಸ್ಥಿತಿ ಹತೋಟಿಗೆ ತರಲು ಬೇರೆ ದಾರಿಯಿಲ್ಲದೆ ಪೊಲೀಸರು ಜಲಫಿರಂಗಿ ದಾಳಿ ನಡೆಸಿದ್ರು.

ಆದಾಗ್ಯೂ, 2019 ರಲ್ಲಿ ಪರೀಕ್ಷೆಗೆ ಅಧಿಸೂಚನೆಯನ್ನು ನೀಡಿದ್ದರೂ CBT-2 ಪರೀಕ್ಷೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಸಿಬಿಟಿ-2 ಪರೀಕ್ಷೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು  ತಿಳಿಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ RRBNTPC ಹಂತ 1 ಪರೀಕ್ಷೆಗಳನ್ನು ಸ್ಥಗಿತಗೊಳಿಸುತ್ತಿದೆ ಎಂದು ಭಾರತೀಯ ರೈಲ್ವೇ ನೇಮಕಾತಿ ಮಂಡಳಿ ಪ್ರಕಟಿಸಿದೆ.ರೈಲ್ವೇಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಹಲವಾರು ಆತಂಕಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಅಡಿಯಲ್ಲಿ ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮತ್ತು ಅನುತ್ತೀರ್ಣರಾದವರ ದೂರುಗಳನ್ನು ಪರಿಶೀಲಿಸಲು ಸಮಿತಿಯನ್ನು ಸಹ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಲಭೆ ಕುರಿತು ಪ್ರತಿಕ್ರಿಯಿಸಿದ ಗಯಾ ಎಸ್‌ಎಸ್‌ಪಿ ಆದಿತ್ಯ ಕುಮಾರ್ ಉದ್ಯೋಗಾಕಾಂಕ್ಷಿಗಳು ಅಶಾಂತಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿದರು. ರೈಲಿಗೆ ಬೆಂಕಿ ಹಚ್ಚಿದ ಹಲವಾರು ಪ್ರತಿಭಟನಾಕಾರರ ಮುಖಗಳನ್ನು ವಿಶೇಷ ತಂತ್ರಜ್ಞಾನದ ಸಹಾಯದಿಂದ ಗುರುತಿಸಿ ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ ಜೊತೆಗೆ ಸರ್ಕಾರದ ಆಸ್ತಿ ನಾಶ ಮಾಡದಂತೆ ಎಚ್ಚರಿಕೆ ನೀಡಿದರು.

ಸಮಸ್ಯೆ ಬಗೆಹರಿಸಲು ಸರ್ಕಾರ ಸಮಿತಿ ರಚಿಸಿದ್ದು, ಅಭ್ಯರ್ಥಿಗಳ ವಾದ ಆಲಿಸಿದ ಬಳಿಕ ವರದಿಯನ್ನು ರೈಲ್ವೆ ಇಲಾಖೆಗೆ ಸಲ್ಲಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಿಹಾರದ ವಿವಿಧ ಭಾಗಗಳಿಂದ ದೇಶದ ವಿವಿಧ ಭಾಗಗಳಿಗೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ಗಯಾ ಮೇಲೆ ಬರುವ ಎಲ್ಲಾ ರೈಲುಗಳು ತಡವಾಗಿ ಸಂಚಾರ ನಡೆಸಿದವು.

Share Post