ಸಿದ್ದರಾಮಯ್ಯ ವಿರುದ್ಧ ಕಿಕ್‌ಬ್ಯಾಕ್ ಆರೋಪ; ಲೋಕಾಯುಕ್ತದಲ್ಲಿ ದೂರು ದಾಖಲು
ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಲ ದಿನಗಳ ಹಿಂದೆ ಕಿಕ್ ಬ್ಯಾಕ್ ಆರೋಪ ಮಾಡಿದ್ದ ಬಿಜೆಪಿ ಮುಖಂಡ ಎನ್.ಆರ್.ರಮೇಶ್, ಈಗ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ಚೆಕ್ ಮೂಲಕ 1.30 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಎನ್.ಆರ್.ರಮೇಶ್ ಆರೋಪ ಮಾಡಿದ್ದು, ಈ ಸಂಬಂಧ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು 2014ರಲ್ಲಿ ಟರ್ಫ್ ಕ್ಲಬ್ ಉಸ್ತುವಾರಿ ಹುದ್ದೆಗೆ ವಿವೇಕಾನಂದ ಅವರನ್ನು ಮೂರು ವರ್ಷಗಳ ಅವಧಿಗೆ ನೇಮಿಸಿದ್ದರು, ಈ ಸಂದರ್ಭದಲ್ಲಿ ವಿವೇಕಾನಂದ ಅವರಿಂದ 1.30 ಕೋಟಿ ರೂಪಾಯಿ ಲಂಚ ಪಡೆದಿದ್ದರು ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ. ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ 1.30 ಕೋಟಿ ಸಾಲ ಪಡೆದಿರುವುದಾಗಿ ಹೇಲೀದ್ದಾರೆ. ಆದರೆ ಅದು ಸಾಲ ಅಲ್ಲ, ಕಿಕ್‌ಬ್ಯಾಕ್ ಎಂದು ಆರೋಪ ಮಾಡಿದ್ದಾರೆ.
ಕೇಂದ್ರ ಗೃಹ ಇಲಾಖೆ ನಿಯಮಗಳ ಪ್ರಕಾರ ಹುದ್ದೆ ನೀಡಿದ್ದಕ್ಕೆ ಪ್ರತಿಯಾಗಿ ಉಡುಗೊರೆ ಅಥವಾ ಚೆಕ್ ಪಡೆಯುವಂತಿಲ್ಲ. ಆದ್ರೆ ಸಿದ್ದರಾಮಯ್ಯ ಚೆಕ್ ಮೂಲಕ ಕಿಕ್‌ಬ್ಯಾಕ್ ಪಡೆದಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಲಂ 7, 8, 9, 10, 13ರ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧ ಎಂದು ದೂರಿರುವ ಎನ್.ಆರ್.ರಮೇಶ್ ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ಈ ಚೆಕ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಿದ್ದಾರೆ.