BengaluruPolitics

ಕಾಂಗ್ರೆಸ್‌ನ 150 ಅಭ್ಯರ್ಥಿಗಳ ಪಟ್ಟಿ ರೆಡಿ; ಮಾ.17ಕ್ಕೆ ಸಿದ್ದರಾಮಯ್ಯ, ಡಿಕೆಶಿ ದೆಹಲಿಗೆ

ಬೆಂಗಳೂರು; ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆದಿದೆ. ಮಾರ್ಚ್‌ 17ಕ್ಕೆ ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ ಇದೆ. ಈ ಸಭೆಯಲ್ಲಿ 120 ರಿಂದ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪಟ್ಟಿ ಸಿದ್ಧವಾಗಿದ್ದು, ಮಾರ್ಚ್‌ 17 ರ ಸಭೆಯಲ್ಲಿ ಅದನ್ನು ಅಂತಿಮ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಅಂದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪಟ್ಟಿಯೊಂದಿಗೆ ದೆಹಲಿ ತೆರಳಲಿದ್ದಾರೆ.

ಮೊದಲ ಪಟ್ಟಿ ಸಿದ್ಧವಾಗಿದೆ. ಆದ್ರೆ ಅಂತಿಮವಾಗಿ ಈ ಬಗ್ಗೆ ಮಾರ್ಚ್‌ 17ರಂದು ಚರ್ಚೆ ನಡೆಸಲಾಗುತ್ತದೆ. ಅನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ , , ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮನಮೋಹನ್ ಸಿಂಗ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ. ವೇಣುಗೋಪಾಲ್​, ಎಕೆ.ಆ್ಯಂಟನಿ, ವೀರಪ್ಪ ಮೊಯ್ಲಿ, ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥ ಮೋಹನ್‌ ಪ್ರಕಾಶ್‌ ಮುಂತಾದವರು ಭಾಗವಹಿಸಲಿದ್ದಾರೆ.

ಮಾರ್ಚ್‌ 17ರಂದೇ ಅಭ್ಯರ್ಥಿಗಳ ಹೆಸರು ಅಂತಿಮವಾದರೂ, ಅದಕ್ಕೆ ಹೈಕಮಾಂಡ್‌ ಮುದ್ರೆ ಒತ್ತಬೇಕಾಗುತ್ತದೆ. ಹೀಗಾಗಿ ಮಾರ್ಚ್‌ 20ರಂದು ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಕಾಂಗ್ರೆಸ್‌ನ ಪ್ರಮುಖ ನಾಯಕರಿಗೂ ಈ ಪಟ್ಟಿಯಲ್ಲಿ ಟಿಕೆಟ್‌ ಘೋಷಿಸಲಾಗುತ್ತದೆ ಎಂದು ತಿಳಿದುಬಂದಿದೆ.

Share Post