ಶಿಕ್ಷಣ ಅಂಕ ಗಳಿಸಲಷ್ಟೇ ಸೀಮಿತವಾಗಬಾರದು; ಸುಧಾಮೂರ್ತಿ
ಬೆಂಗಳೂರು; ಶಿಕ್ಷಣ ಅನ್ನೋದು ಅಂಕ ಗಳಿಸಲಷ್ಟೇ ಸೀಮಿತವಾಗಬಾರದು. ಹೆಚ್ಚು ಅಂಕ ಗಳಿಸಿದ್ದರೂ ಜೀವನದಲ್ಲಿ ಯಶಸ್ಸು ಪಡೆಯದ ಹಲವಾರು ಉದಾಹರಣೆಗಳು ನಮ್ಮಲ್ಲಿ ಸಿಗುತ್ತವೆ. ಹೀಗಾಗಿ ಶಿಕ್ಷಣ ಅನ್ನೋದು ಮಾನವೀಯ ದೃಷ್ಟಿಕೋನ, ನಂಬಿಕೆಯ ಮೇಲೆ ಕಲಿಯಬೇಕು ಎಂದು ಇನ್ಪೋಸಿಸ್ ಫೌಂಡೇಷನ್‌ನ ಸುಧಾಮೂರ್ತಿ ಹೇಳಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಆರಂಭವಾಗಿರುವ ವಿನೂತನ ಪ್ರಯೋಗಾಲಯ ಉದ್ಘಾಟನೆ ಮಾಡಿ ಸುಧಾಮೂರ್ತಿ ಮಾತನಾಡಿದರು. ಅನೇಕ ಕಾರ್ಯಕ್ರಮಗಳಿಗೆ ನನಗೆ ಆಹ್ವಾನ ಬರುತ್ತದೆ. ಆದರೆ ನಾನು ಎಲ್ಲಾ ಕಾರ್ಯಕ್ರಮಗಳಿಗೂ ಹೋಗುವುದಿಲ್ಲ. ವಿಭಿನ್ನ ಎನಿಸಿದರೆ ಮಾತ್ರ ಆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಐಶ್ವರ್ಯ ನನ್ನ ಬಳಿ ಬಂದು ಈ ಪ್ರಯೋಗಾಲಯದ ಬಗ್ಗೆ ತಿಳಿಸಿದಾಗ ನನಗೆ ಬಹಳ ಸಂತೋಷವಾಯಿತು ಎಂದು ಸುಧಾಮೂರ್ತಿ ಹೇಳಿದರು.
ಇದು ಗೂಗಲ್ ಕಾಲ. ಗೂಗಲ್‌ನಲ್ಲಿ ಯಾವ ಮಾಹಿತಿ ಬೇಕಾದರೂ ಸಿಗುತ್ತದೆ. ಹೀಗಾಗಿ ಮಕ್ಕಳು ಗೂಗಲ್‌ನಿಂದ ಎಲ್ಲವೂ ತಿಳಿದುಕೊಳ್ಳುತ್ತಿದ್ದಾರೆ. ಹೆಚ್ಚು ಬುದ್ಧಿವಂತರಾಗುತ್ತಿದ್ದಾರೆ. ಹೀಗಾಗಿ ಪಾಠ ಮಾಡುವವರು ಇಂತಹ ಮಕ್ಕಳಿಗೆ ಪಾಠ ಮಾಡಲು ಉತ್ತಮ ತಯಾರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸುಧಾಮೂರ್ತಿ ಇದೇ ವೇಳೆ ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರ ಪತ್ನಿ ಹಾಗೂ ಮಗಳು ಐಶ್ವರ್ಯಾ ಮತ್ತಿತರರು ಇದ್ದರು.