Bengaluru

ಪೌರ ಕಾರ್ಮಿಕರ ವೇತನ 35 ಸಾವಿರಕ್ಕೆ ಹೆಚ್ಚಿಸಬೇಕು ; ಜಮೀರ್ ಅಹ್ಮದ್

ಬೆಂಗಳೂರು; ನಗರದ ಸ್ವಚ್ಛತೆ ಕಾಪಾಡುವಲ್ಲಿ ಹಗಲು ರಾತ್ರಿ ಶ್ರಮಿಸುವ ಪೌರ ಕಾರ್ಮಿಕರ ವೇತನವನ್ನು ಸರ್ಕಾರ ಕೂಡಲೇ 18,000 ರೂ. ರಿಂದ 35,000 ರೂ.ಗೆ ಹೆಚ್ಚಿಸಬೇಕು ಮತ್ತು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರನ್ನು ಅವರ ಸೇವಾ ಅವಧಿ ಆಧಾರಿಸಿ ಖಾಯಂ ಗೊಳಿಸಬೇಕು ಎಂದು ಚಾಮರಾಜಪೇಟೆ ಶಾಸಕ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಆಗ್ರಹಿಸಿದ್ದಾರೆ.

ಫ್ರೀಡಂ ಪಾರ್ಕಿನಲ್ಲಿ ಕಳೆದ ಐದಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಎರಡು ದಿನಗಳೊಳಗಾಗಿ ಈಡೇರಿಸದಿದ್ದರೆ, ಸೋಮವಾರದಿಂದ ನಾನೂ ಇವರೊಂದಿಗೆ ಕುಳಿತು ಪ್ರತಿಭಟಿಸುತ್ತೇನೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದರು. ಆ ಪ್ರಕಾರ, ಇಂದಿನಿಂದ ಪ್ರತಿಭಟನೆಯಲ್ಲಿ ತೊಡಗಿರುವ ಅವರು, ಪೌರ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.

ಪೌರ ಕಾರ್ಮಿಕರ ಹೋರಾಟಕ್ಕೆ ಸಾಥ್ ನೀಡಲು ಇಲ್ಲಿಗೆ ಬಂದಿದ್ದೇನೆ. ಅವರು ಎಷ್ಟು ದಿನ ಪ್ರತಿಭಟನೆ ನಡೆಸುತ್ತಾರೋ, ಅಷ್ಟು ದಿನ ನಾನೂ ಅವರೊಂದಿಗೆ ಫ್ರೀಡಂ ಪಾರ್ಕ್ ನಲ್ಲಿಯೇ ಕುಳಿತುಕೊಳ್ಳುತ್ತೇನೆ. ನಮ್ಮ ನಾಯಕರಾದ  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, 2016ರಲ್ಲಿ ಪೌರ ಕಾರ್ಮಿಕರ ವೇತನವನ್ನು 7 ಸಾವಿರ ರೂ. ರಿಂದ 18 ಸಾವಿರ ರೂ. ಗೆ ಏರಿಸಿದ್ದರು. ಆದರೆ, ಬಿಜೆಪಿ ಸರ್ಕಾರ ಇದುವರೆಗೂ ಪೌರ ಕಾರ್ಮಿಕರ ವೇತನದಲ್ಲಿ ನಯಾ ಪೈಸೆ ಹೆಚ್ಚಳ ಮಾಡದಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ವಿದ್ಯುತ್ ದರ ಸೇರಿ, ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೇವಲ 18 ಸಾವಿರ ರೂ. ದಿಂದ ಮನೆ ತೂಗಿಸಲು ಸಾಧ್ಯವೇ, ಮಕ್ಕಳ ವಿಧ್ಯಾಭ್ಯಾಸ ನೋಡಿಕೊಳ್ಳಲು ಸಾಧ್ಯವೇ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.

Share Post