ನಾನೂ ರಾಮಭಕ್ತ, ನನ್ನನ್ನೂ ಬಂಧಿಸಿ ಸಿದ್ದರಾಮಯ್ಯನವರೇ; ಬಿಜೆಪಿಯಿಂದ ಪ್ರೊಫೈಲ್ ಪಿಕ್ಚರ್ ಅಭಿಯಾನ
ಬೆಂಗಳೂರು; ಹುಬ್ಬಳ್ಳಿಯಲ್ಲಿ 31 ವರ್ಷಗಳ ಹಿಂದಿನ ಅಯೋಧ್ಯೆ ಕೇಸ್ ರಿಓಪನ್ ಮಾಡಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ ಮುಂದುವರೆಸಿದೆ. ಇವತ್ತು ಬಿಜೆಪಿ ನಾಯಕರು ವಿನೂತನ ರೀತಿಯ ಪ್ರತಿಭಟನೆ ಹಾಗೂ ಕ್ಯಾಂಪೇನ್ ಶುರು ಮಾಡಿದ್ದಾರೆ. ನಾಯಕರು ಅವರವರ ಕ್ಷೇತ್ರ ಹಾಗೂ ಜಿಲ್ಲೆಗಳಲ್ಲಿ ಪೋಸ್ಟರ್ಗಳನ್ನು ಹಿಡಿದು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ಫೇಸ್ಬುಕ್, ಟ್ವಿಟರ್ಗಳಲ್ಲಿ ಪ್ರೊಫೈಲ್ ಪಿಕ್ಚರ್ಗಳ ಮೂಲಕ ಅಭಿಯಾನ ಶುರು ಮಾಡಿದ್ದಾರೆ.
ʻನಾನೂ ರಾಮಭಕ್ತ, ನನ್ನನ್ನೂ ಬಂಧಿಸಿ ಸಿದ್ದರಾಮಯ್ಯನವರೇʼ ಎಂಬ ಘೋಷಣೆಯುಳ್ಳು ಫೋಟೋವನ್ನು ಎಲ್ಲಾ ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಪಿಕ್ಚರ್ ಆಗಿಸಿದ್ದಾರೆ. ಈ ಮೂಲಕ ಬಿಜೆಪಿ ಹೊಸ ರೀತಿಯ ಆಂದೋಲನ ಶುರು ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡಾ ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ ಪಿಕ್ಚರ್ ಬದಲಿಸಿಕೊಂಡಿದ್ದಾರೆ.
ಇನ್ನೊಂದೆಡೆ ಶಾಸಕ ಸುನಿಲ್ ಕುಮಾರ್ ಅವರು ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದು, ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಕೂಡಾ ಪೋಸ್ಟರ್ ಹಿಡಿದು ಏಕಾಂಗಿಯಾಗಿ ಪ್ರತಿಭಟನೆ ಮಾಡಿದರು. ಈ ವೇಳೆ ಕೂಡಾ ಅವರನ್ನು ಪೊಲೀಸರು ವಶಕ್ಕೆ ಪಡೆದು ಅನಂತರ ಬಿಡುಗಡೆ ಮಾಡಿದರು.
ಇನ್ನು ಸಿ.ಟಿ. ರವಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಠಾಣೆ ಒಳ ನುಗ್ಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.