BengaluruPolitics

ಹಳೇ ಮೈಸೂರು ಭಾಗ ಗೆಲ್ಲಲು ಬಿಜೆಪಿ ಮೆಗಾ ಪ್ಲ್ಯಾನ್‌; ಬಿಜೆಪಿ ಚಾಣಕ್ಯನ ತಂತ್ರ ವರ್ಕೌಟ್‌ ಆಗುತ್ತಾ..?

ಬೆಂಗಳೂರು; ಮೊನ್ನೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಚಾಣಕ್ಯ ಅಮಿತ್‌ ಷಾ ಮಂಡ್ಯಕ್ಕೆ ಬಂದಿದ್ದರು. ಅವರ ಈ ಆಗಮನ ಕೂಡಾ ದೊಡ್ಡ ರಾಜಕೀಯ ತಂತ್ರಗಾರಿಕೆ ಎಂದೇ ಬಿಂಬಿಸಲಾಗಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಅಷ್ಟೊಂದು ಪ್ರಾಬಲ್ಯವಿಲ್ಲ. ಹೀಗಾಗಿ, ಅಮಿತ್‌ ಷಾ ಅವರು ಈ ಭಾಗದ ಪ್ರಬಲ ಸಮುದಾಯವಾದ ಒಕ್ಕಲಿಗರ ಮತಗಳನ್ನು ಸೆಳೆಯಲು ಬಂದಿದ್ದರು. ರಾಜ್ಯದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರ ಸಮುದಾಯಗಳು ಪ್ರಮುಖವಾದುವು. ಬಿಜೆಪಿಗೆ ಮೊದಲಿನಿಂದಲೂ ಲಿಂಗಾಯತರು ಬೆಂಬಲಕ್ಕಿದ್ದಾರೆ. ಒಕ್ಕಲಿಗರನ್ನೂ ಬುಟ್ಟಿಗೆ ಹಾಕಿಕೊಂಡರೆ, ನಮ್ಮ ನಾಗಾಲೋಟಕ್ಕೆ ಅಡ್ಡಿಯೇ ಇಲ್ಲ ಅನ್ನೋ ಲೆಕ್ಕಾಚಾರ ಬಿಜೆಪಿ ನಾಯಕರದ್ದು. ಅದೇ ಲೆಕ್ಕಾಚಾರದಲ್ಲೇ ಬಿಜೆಪಿ ಚಾಣಕ್ಯ ಅಮಿತ್‌ ಷಾ, ಹಳೇ ಮೈಸೂರು ಭಾಗದ 80 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳೇನೋ ಸರಿಯಾಗಿದೆ. ಆದ್ರೆ ಬಿಜೆಪಿ ಚಾಣಕ್ಯನ ಈ ತಂತ್ರ ವರ್ಕೌಟ್‌ ಆಗುತ್ತಾ..? ನಿಜಕ್ಕೂ ಅಮಿತ್‌ ಷಾ ತಂತ್ರಗಾರಿಕೆ ಏನು..? ಇನ್ನೂ ನೆಲೆಯೇ ಕಂಡುಕೊಳ್ಳದ ಮಂಡ್ಯ, ರಾಮನಗರ ಭಾಗದಲ್ಲಿ ಕಮಲವನ್ನು ಅರಳಿಸೋಕೆ ಆಗುತ್ತಾ..? ಎಲ್ಲಾ ಸರಿ ಕೆ.ಆರ್‌.ಪೇಟೆ, ವರುಣಾ, ಹುಣಸೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಚೈತನ್ಯ ಮೂಡಿಸಿದ ಬಿ.ವೈ.ವಿಜಯೇಂದ್ರರನ್ನು ಅಮಿತ್‌ ಷಾ ದೂರವಿಟ್ಟಿದ್ದೇಕೆ..? ಚಾಣಕ್ಯನ ರಾಜಕೀಯ ತಂತ್ರಗಾರಿಕೆ ಬಿಜೆಪಿಗೇ ಮುಳುವಾಗುತ್ತಾ..? ಹಳೇ ಮೈಸೂರು ಭಾಗದಲ್ಲಿ ಅಮಿತ್‌ ಷಾ ಹೆಚ್ಚು ಆಸಕ್ತಿ ವಹಿಸಿದಷ್ಟೂ ಕಾಂಗ್ರೆಸ್‌ಗೆ ಲಾಭವಾಗುತ್ತಾ..? ಈ ಬಗ್ಗೆ ನೋಡೋಣ ಬನ್ನಿ.

ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕು ತಿಂಗಳಷ್ಟೇ ಬಾಕಿ ಇದೆ. ಗುಜರಾತ್‌ನಲ್ಲಿ ಪ್ರಚಂಡ ಬಹುಮತ ಪಡೆದ ಖುಷಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಈಗ ಪೂರ್ತಿ ಕರ್ನಾಟಕದ ಮೇಲೆ ಗಮನ ಇಟ್ಟಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಅಮಿತ್‌ ಷಾ ತಂತ್ರಗಾರಿಕೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ಮೋದಿ ವರ್ಚಸ್ಸನ್ನು ಬಳಸಿಕೊಂಡು ಚುನಾವಣೆ ಗೆಲ್ಲೋದಕ್ಕೆ ಬಿಜೆಪಿ ಮೆಗಾ ಪ್ಲ್ಯಾನ್‌ ಮಾಡಿದೆ. ಅದರ ಭಾಗವಾಗಿಯೇ ಅಮಿತ್‌ ಷಾ ಮೊನ್ನೆ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದರು. ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮಿತ್‌ ಷಾ ಭಾಗವಹಿಸಿದ್ದೇ ಅಲ್ಲದೇ, ಮಂಡ್ಯ, ಮೈಸೂರು, ರಾಮನಗರ ಭಾಗದ ಜೆಡಿಎಸ್‌ ಮುಖಂಡರನ್ನು ಸೆಳೆಯೋಕೆ ತಂತ್ರಗಾರಿಕೆ ರೂಪಿಸಿದ್ದಾರೆ. ಜೆಡಿಎಸ್‌ ಕೇವಲ ಕುಟುಂಬಕ್ಕೆ ಸೀಮಿತವಾಗಿದೆ. ನೀವು ಅದೇ ಪಕ್ಷದಲ್ಲಿದ್ದರೆ ನಿಮ್ಮ ರಾಜಕೀಯ ಜೀವನ ಮುಗಿದೇ ಹೋಗುತ್ತದೆ. ಜೆಡಿಎಸ್‌ನಲ್ಲಿ ನಿಮಗೆ ಫ್ಯೂಚರ್‌ ಇಲ್ಲ, ಹೀಗಾಗಿ ನೀವೆಲ್ಲಾ ಬಿಜೆಪಿಗೆ ಬಂದರೆ ನಿಮಗೂ ಶಕ್ತಿ ಬರುತ್ತದೆ. ಜೊತೆಗೆ ನಿಮ್ಮ ಭಾಗದ ಅಭಿವೃದ್ಧಿಯೂ ಆಗುತ್ತದೆ ಎಂದು ಹೇಳಿ ಜೆಡಿಎಸ್‌ ಮುಖಂಡರನ್ನು ಸೆಳೆಯೋ ಪ್ರಯತ್ನ ನಡೆದಿದೆ. ಅಸಮಾಧಾನ ಹೊಂದಿರುವ ಜೆಡಿಎಸ್‌ ಮುಖಂಡರನ್ನು ಗುರುತಿಸಿ ಅವರ ಮನವೊಲಿಸುವ ಕಾರ್ಯ ಕೂಡಾ ನಡೆದಿದೆ. ಕಾಂಗ್ರೆಸ್‌ನ ಕೆಲವರನ್ನು ಕೂಡಾ ಸೆಳೆಯೋ ಪ್ರಯತ್ನಗಳೂ ನಡೆಯುತ್ತಿವೆ ಎನ್ನಲಾಗಿದೆ ಈಗಾಗಲೇ ಸಂಸದೆ ಸುಮಲತಾ ಆಪ್ತ ಸಚ್ಚಿದಾನಂದ ಸೇರಿದಂತೆ ಹಲವರು ಬಿಜೆಪಿ ಸೇರಿದ್ದಾರೆ.

ಮಂಡ್ಯ, ಮೈಸೂರು, ರಾಮನಗರ ಭಾಗದಲ್ಲಿ ಜಾತಿ ರಾಜಕೀಯ ಹೆಚ್ಚಾಗಿ ನಡೆಯುತ್ತದೆ. ಆದ್ರೆ ಇಲ್ಲಿ ಹಿಂದೂ ಟ್ರಂಪ್‌ ಕಾರ್ಡ್‌ ಬಳಸುತ್ತಿರುವ ಬಿಜೆಪಿ ಜಾತಿ ರಾಜಕೀಯ ಬಿಟ್ಟು ಬಿಜೆಪಿಯನ್ನು ಬೆಂಬಲಿಸಿದರೆ ನಿಮಗೆ ಏನೆಲ್ಲಾ ಅನುಕೂಲಗಳಿವೆ ಎಂಬುದನ್ನು ಜೆಡಿಎಸ್‌ ಪಕ್ಷದ ಮುಖಂಡರುಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಕೂಡಾ ಮಾಡಲಾಗಿದೆ. ಇನ್ನು ರಾಮನಗರ ಜಿಲ್ಲೆಯಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌ ಪ್ರಾಬಲ್ಯ ಇದೆ. ಇವರಿಬ್ಬರನ್ನೂ ಹಣಿಯಲು ಬಿಜೆಪಿ ನಾಯಕರು ಸಚಿವ ಅಶ್ವತ್ಥನಾರಾಯಣ್‌ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಮಾಗಡಿ ಮೂಲದವರಾದ ಅಶ್ವತ್ಥನಾರಾಯಣ್‌ ಅವರನ್ನು ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಒಕ್ಕಲಿಗ ನಾಯಕನಾಗಿ ಬಿಂಬಿಸಲು ಹೊರಟಿದೆ. ಅದಕ್ಕಾಗಿಯೇ ಮಾಗಡಿಯಲ್ಲಿ ಕೆಂಪೇಗೌಡ ಸಮಾಧಿಯನ್ನು ಅಭಿವೃದ್ಧಿ ಮಾಡಲಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಬೃಹತ್‌ ಕೆಂಪೇಗೌಡ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಇದೆಲ್ಲವನ್ನೂ ಅಶ್ವತ್ಥನಾರಾಯಣ್‌ ಅವರ ಮುಂದಾಳತ್ವದಲ್ಲೇ ನಡೆದಿದೆ. ಈ ಮೂಲಕ, ಒಕ್ಕಲಿಗರಿಗೆ ಹತ್ತಿರವಾಗಲು ಬಿಜೆಪಿ ಪ್ರಯತ್ನ ಮಾಡುತ್ತಿದೆ.

ರಾಮನಗರ ಗೆಲ್ಲಲು ರಾಮನ ಅಸ್ತ್ರ
ಇನ್ನು ಅಮಿತ್‌ ಷಾ ಮಂಡ್ಯಕ್ಕೆ ಭೇಟಿ ಕೊಟ್ಟ ಬೆನ್ನಲ್ಲೇ ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮನ ಮಂದಿರ ಕಟ್ಟೋ ಬಗ್ಗೆ ಕೂಡಾ ಮಾತುಗಳು ಕೇಳಿಬರುತ್ತಿವೆ. ರಾಮದೇವರ ಬೆಟ್ಟಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಈ ಬೆಟ್ಟದಲ್ಲಿ ಸೀತೆ, ರಾಮ ಹಾಗೂ ಲಕ್ಷಣ ಕೆಲ ಕಾಲ ತಂಗಿದ್ದರು ಎಂಬ ಪ್ರತೀತಿ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಅಲ್ಲಿ ಭವ್ಯವಾದ ರಾಮಮಂದಿರ ಕಟ್ಟೋದಕ್ಕೆ ಬಿಜೆಪಿ ಮುಂದಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಅಶ್ವತ್ಥನಾರಾಯಣ್‌ ಅವರನ್ನು ಮುಂದಿಟ್ಟುಕೊಂಡು ರಾಮಮಂದಿರ ನಿರ್ಮಾಣ ಮಾಡೋದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ. ಒಂದು ಕಡೆ ಕೆಂಪೇಗೌಡರ ನಾಡನ್ನು ಅಭಿವೃದ್ಧಿ ಮಾಡಿ ಒಕ್ಕಲಿಗರನ್ನು ಸೆಳೆಯುವುದು, ಇನ್ನೊಂದೆಡೆ ರಾಮನ ಮಂದಿರ ಕಟ್ಟಿ ಹಿಂದೂಗಳನ್ನು ಸಂಘಟಿಸುವುದು ಇದರ ಹಿಂದಿನ ಉದ್ದೇಶ. ಈ ತಂತ್ರಗಾರಿಕೆ ವರ್ಕೌಟ್‌ ಆದರೆ, ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳನ್ನು ಹೊಡೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಅಂದರೆ ಡಿ.ಕೆ.ಶಿವಕುಮಾರ್‌ ಹಾಗೂ ಹೆಚ್‌.ಡಿ.ಕುಮಾರಸ್ವಾಮಿ ಇಬ್ಬರಿಗೂ ಠಕ್ಕರ್‌ ಕೊಡೋಕೆ ಬಿಜೆಪಿ ಭಾರಿ ಪ್ಲ್ಯಾನ್‌ ಮಾಡಿದೆ. ಈ ಕಾರಣಕ್ಕಾಗಿಯೇ ಅಮಿತ್‌ ಷಾ ಅವರು, ಎರಡು ದಿನದ ರಾಜ್ಯ ಪ್ರವಾಸದಲ್ಲಿ ಬರೀ ಮೈಸೂರು ಭಾಗದ ಬಗ್ಗೆಯೇ ಹೆಚ್ಚು ಚರ್ಚೆಗಳನ್ನು ಮಾಡಿದ್ದಾರೆ. ಐವತ್ತಕ್ಕೂ ಹೆಚ್ಚು ನಾಯಕರನ್ನು ಕರೆಸಿ, ಪಕ್ಷಕ್ಕೆ ಬರುವಂತೆ ಆಹ್ವಾನ ಕೂಡಾ ಮಾಡಿದ್ದಾರೆ ಎನ್ನಲಾಗಿದೆ. ಅಶ್ವತ್ಥನಾರಾಯಣ್‌ ಅವರನ್ನು ರಾಮನಗರದಲ್ಲಿ ಹಾಗೂ ಅಶೋಕ್‌ ಅವರನ್ನು ಬೆಂಗಳೂರಿನಲ್ಲಿ ಬಿಟ್ಟು, ಒಕ್ಕಲಿಗರ ಮತಗಳನ್ನು ಸೆಳೆದರೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತೆ ಎಂದು ಬಿಜೆಪಿ ಲೆಕ್ಕ ಹಾಕಿಕೊಂಡಿದೆ.

ವಿಜಯೇಂದ್ರರನ್ನು ದೂರ ಇಟ್ಟರಾ ವರಿಷ್ಠರು..?
ಬಿಜೆಪಿಯ ಎಲ್ಲಾ ಲೆಕ್ಕಾಚಾರಗಳೂ ಓಕೆ. ಆದ್ರೆ ಈ ಭಾಗದಲ್ಲಿ ಬಿಜೆಪಿ ಚಿಗುರೊಡೆಯಬೇಕಾದರೆ ಅದಕ್ಕೆ ಕಾರಣ ಬಿ.ವೈ.ವಿಜಯೇಂದ್ರ. ಕೆ.ಆರ್‌.ಪೇಟೆಯಲ್ಲಿ ವಿಜಯೇಂದ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಅಲ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲೋದಕ್ಕೆ ಸಾಧ್ಯವಾಯಿತು. ಹನೂರು, ಹುಣಸೂರು, ಕೊಳ್ಳೆಗಾಲ, ಚಾಮರಾಜ ನಗರ, ವರುಣಾ ಮುಂತಾದ ಕಡೆ ವಿಜಯೇಂದ್ರ ಅವರ ವರ್ಚಸ್ಸಿದೆ. ಇಲ್ಲಿ ಈಗಲೂ ವಿಜಯೇಂದ್ರ ಅವರು ಓಡಾಟ ನಡೆಸಿದ್ದಾರೆ. ಆದ್ರೆ, ಬಿಜೆಪಿ ವರಿಷ್ಠರು ಮಾತ್ರ ವಿಜಯೇಂದ್ರ ಅವರನ್ನು ಹೊರಗಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಇದ್ರಿಂದಾಗಿ ವಿಜಯೇಂದ್ರ ಹಾಗೂ ಯಡಿಯೂರಪ್ಪ ಇಬ್ಬರಿಗೂ ಬೇಸರ ಇದೆ ಎನ್ನಲಾಗುತ್ತಿದೆ. ವಿಜಯೇಂದ್ರ ಅವರು ಪ್ರಬಲ ನಾಯಕರಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ರೋಲ್‌ ಕೊಟ್ಟರೆ ಮುಂದೆ ಸಿಎಂ ಸ್ಥಾನಕ್ಕೆ ಬೇಡಿಕೆ ಇಡಬಹುದು. ಸಿಗದಿದ್ದರೆ ಭಿನ್ನಮತ ಉಂಟು ಮಾಡಬಹುದು ಎಂಬ ಭಯ ಬಿಜೆಪಿಗೆ ಇದ್ದಂತೆ ಕಾಣುತ್ತಿದೆ. ಹೀಗಾಗಿಯೇ ಪಕ್ಷ ಸಂಘಟನೆಯ ಸಾಮರ್ಥ್ಯವಿದ್ದರೂ ವಿಜಯೇಂದ್ರ ಅವರನ್ನು ಬಿಜೆಪಿ ವರಿಷ್ಠರು ದೂರ ಇಟ್ಟಿದ್ದಾರೆ. ಅವರ ಭಾಗದಲ್ಲಿ ಅಶ್ವತ್ಥನಾರಾಯಣ್‌ ಅವರನ್ನು ಮುನ್ನೆಲೆಗೆ ತರೋ ಪ್ರಯತ್ನ ಮಾಡುತ್ತಿದ್ದಾರೆ.

ಬಿಜೆಪಿಗೆ ಇದು ತಿರುಮಂತ್ರವಾಗುತ್ತಾ..?

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಸಂಘಟಿಸುವ ಆ ಪಕ್ಷದ ವರಿಷ್ಠ ತಂತ್ರಗಾರಿಕೆ ಏನೋ ಸರಿಯಾಗಿದೆ. ಆದ್ರೆ ಆ ಪ್ಲ್ಯಾನ್‌ ಸರಿಯಾಗಿ ವರ್ಕೌಟ್‌ ಆಗಲಿಲ್ಲ ಅಂದ್ರೆ ಅದು ಕಾಂಗ್ರೆಸ್‌ಗೆ ವರದಾನವಾಗೋ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ಯಾಕಂದ್ರೆ, ಸದ್ಯದ ಮಟ್ಟಿಗೆ ಹೇಳೋದಾದರೆ, ಮಂಡ್ಯ, ರಾಮನಗರ ಭಾಗದಲ್ಲಿ ಬಿಜೆಪಿಗೆ ಗೆಲ್ಲೋಷ್ಟು ಪ್ರಾಬಲ್ಯ ಇಲ್ಲ. ಬಿಜೆಪಿ ಇಲ್ಲಿ ಮತಗಳನ್ನು ಒಡೆಯುತ್ತೆ ಅಷ್ಟೇ. ಅದೂ ಕೂಡಾ ಬಿಜೆಪಿ ಮಾಡುತ್ತಿರುವ ತಂತ್ರಗಾರಿಕೆ ನೋಡಿದರೆ ಜೆಡಿಎಸ್‌ ಮತಗಳನ್ನು ಹೆಚ್ಚು ಸೆಳೆಯುವ ಸಾಧ್ಯತೆ ಇದೆ. ಹಾಗೇನಾದರೂ ಬಿಜೆಪಿ ಅಭ್ಯರ್ಥಿಗಳು ಜೆಡಿಎಸ್‌ನ ಒಂದಷ್ಟು ಮತಗಳನ್ನು ಸೆಳೆದರೆ ಅದು ನೇರವಾಗಿ ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ. ಯಾಕಂದ್ರೆ, ಮಂಡ್ಯ ಭಾಗದಲ್ಲಿ ಜೆಡಿಎಸ್‌ಗೆ ಈ ಬಾರಿ ಕೊಂಚ ಪ್ರಾಬಲ್ಯ ಕಡಿಮೆಯಾಗಿದೆ. ನಾನಾ ಕಾರಣಕ್ಕಾಗಿ ಜನರು ಜೆಡಿಎಸ್‌ ಬಗ್ಗೆ ತಾತ್ಸಾರ ತೋರುತ್ತಿದ್ದಾರೆ. ಹೀಗಿರುವಾಗ ಜೆಡಿಎಸ್‌ ನಾಯಕರು, ಮಂಡ್ಯದಲ್ಲಿ ಹೆಚ್ಚು ಸ್ಥಾನಗಳನ್ನು ನಾನಾ ಕಸರತ್ತು ಮಾಡುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಬಂದು ಕಡ್ಡಿ ಅಲ್ಲಾಡಿಸಿದರೆ ಅದು ಜೆಡಿಎಸ್‌ಗೆ ಹೊಡೆತ ಬೀಳುತ್ತೆ, ಕಾಂಗ್ರೆಸ್‌ಗೆ ಅನುಕೂಲವಾಗುತ್ತೆ ಎಂದು ಹೇಳಲಾಗುತ್ತಿದೆ.

Share Post