ಬರೋಬ್ಬರಿ 13 ಮುದ್ದೆ ತಿಂದ ಭೂಪ; ಕುರಿ ಗೆದ್ದ ಬೆಂಗಳೂರಿನ ವ್ಯಕ್ತಿ
ಬೆಂಗಳೂರು; ಕೋಳಿ ಸಾರು, ರಾಗಿ ಮುದ್ದೆ.. ಯಾರಿಗೆ ಇಷ್ಟ ಇಲ್ಲ ಹೇಳಿ… ಮಾಂಸಪ್ರಿಯರಿಗೆ ಈ ಕಾಂಬಿನೇಷನ್ ಸಖತ್ ಅಚ್ಚುಮೆಚ್ಚು. ಈ ಕಾರಣಕ್ಕಾಗಿಯೇ ನಾಟಿ ಕೋಳಿ ಸಾರು ಹಾಗೂ ರಾಗಿ ಮುದ್ದೆ ತಿನ್ನುವ ಸ್ಪರ್ಧೆಗಳನ್ನೇ ನಡೆಲಾಗುತ್ತದೆ. ಅಲ್ಲಿ ಸ್ಪರ್ಧಿಗಳು ಬಕಾಸುರರ ರೀತಿ ಮುದ್ದೆ ತಿನ್ನೋದನ್ನು ನೋಡೋದೇ ಒಂದು ಆನಂದ. ಬೆಂಗಳೂರು ಹೊರವಲಯದ ಆನೇಕಲ್ ಬಳಿಯ ಸರ್ಜಾಪುರದಲ್ಲಿ ನಿನ್ನೆ ಇಂತಹದ್ದೊಂದು ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಹರೀಶ್ ಎಂಬುವವರು 13 ಮುದ್ದೆ ತಿಂದು ಮೊದಲ ಬಹುಮಾನ ಪಡೆದುಕೊಂಡಿದ್ದಾರೆ.
ಸರ್ಜಾಪುರದ ಮಂಥನ ಹೋಟೆಲ್ ಹಾಗೂ ಸರ್ಜಾಪುರದ ಯುವಕರು ಈ ಸ್ಪರ್ಧೆ ಆಯೋಜಿಸಿದ್ದರು. ಕುಣಿಗಲ್, ಮಂಡ್ಯ, ಮಾಲೂರು ಸೇರಿ ಹಲವೆಡೆಗಳಿಂದ 40 ಸ್ಪರ್ಧಿಗಳು ಆಗಮಿಸಿದ್ದರು. ಮೊದಲಿಗೆ ತಲಾ ಅರ್ಧ ಕೆಜಿ ತೂಕದ ಎರಡು ಮುದ್ದೆಗಳನ್ನು ನೀಡಲಾಗಿತ್ತು. ಅದನ್ನು ತಿಂದು ಮುಗಿಸಿದವರಿಗೆ ಅಷ್ಟೇ ತೂಕದ ಮುದ್ದೆಗಳನ್ನು ನೀಡುತ್ತಾ ಬರಲಾಯಿತು. 30 ನಿಮಿಷದಲ್ಲಿ ಯಾರು ಹೆಚ್ಚು ಮುದ್ದೆ ತಿನ್ನುತ್ತಾರೋ ಅವರಿಗೆ ಬಹುಮಾನ ಎಂದು ಹೇಳಲಾಗಿತ್ತು. ಅದರಂತೆ ಮಹಾಲಕ್ಷ್ಮೀ ಲೇಔಟ್‌ನ ಹರೀಶ್ ಎಂಬುವವರು 13 ಮುದ್ದೆ ತಿಂದು, ಕುರಿಯನ್ನು ಬಹುಮಾನವಾಗಿ ಪಡೆದರು.
ಇನ್ನು ಶ್ರೀನಿವಾಸ್ ಎಂಬುವವರು ಎರಡನೇ ಬಹುಮಾನ ಪಡೆದರೆ, ಆನಂದ್ ಮೂರನೇ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರು.