Bengaluru

ರಾಜ್ಯಾದ್ಯಂತ ಮಳೆಯ ಅಬ್ಬರ; ಮನೆಗಳಿಗೆ ನುಗ್ಗಿದ ನೀರು

ಬೆಂಗಳೂರು; ರಾಜ್ಯಾದ್ಯಂತ ಭಾರಿ ಮಳೆಯಾಗಿದ್ದು, ಅವಾಂತರ ಸೃಷ್ಟಿಸಿದೆ. ಬಳ್ಳಾರಿ, ವಿಜಯನಗರ, ಹಾಸನ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಇದರಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ. ಇದರಿಂದ ಎರಡೂ ಜಿಲ್ಲೆಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಬಳ್ಳಾರಪ್ಪ ಕಾಲೋನಿ, ವೆಂಕಟೇಶ್ವರ ನಗರ, ಗಾಂಧಿ ನಗರದ ಹಿಂಭಾಗದ ಮನೆಗಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಭಾರಿ ನಷ್ಟವುಂಟಾಗಿದೆ.

ದುರ್ಗಮ್ಮನ ದೇವಸ್ಥಾನ ಬಳಿ ಹಾಗೂ ಸತ್ಯನಾರಾಯಣ ಪೇಟೆಯ ಅಂಡರ್‌ ಪಾಸ್​ಗೆ ನೀರು ನುಗ್ಗಿದ್ದು, ಸಂಚಾರ ಬಂದ್ ಆಗಿದೆ.  ಹೊಸಪೇಟೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಹಗರಿ ಬೊಮ್ಮನಹಳ್ಳಿ ತಾಲೂಕಿನ ರಾಯರಾಳು ತಾಂಡಾದ 30ಕ್ಕೂ ಅಧಿಕ‌ ಮನೆಗಳು ನೀರಿನಲ್ಲಿ ಜಲಾವೃತವಾಗಿವೆ.

ಜಿ.ನಾಗಲಾಪುರ ಗ್ರಾಮದ ಹಳ್ಳದ ನೀರು ಒಮ್ಮಲೆ ಹರಿದ ಪರಿಣಾಮ ನೀರು ಗ್ರಾಮಕ್ಕೆ ನುಗ್ಗಿದೆ. ಬ್ಯಾಲಕುಂದಿ, ಗರಗ ನಾಗಲಾಪುರ ಗ್ರಾಮಗಳಲ್ಲಿ ಕೆರೆ, ಕಟ್ಟೆಗಳು ಭರ್ತಿಯಾಗಿ, ಹಳ್ಳ- ಕೊಳ್ಳಗಳು ತುಂಬಿ ಹರಿದಿವೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆ ಸಂಪೂರ್ಣ ಹಾಳಾಗಿದೆ.

ರಾಮನಗರ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಮಳೆ ಅಬ್ಬರಿಸಿದೆ ಅರ್ಕಾವತಿ, ವೃಷಭಾವತಿ ಹಾಗೂ ಕಣ್ವ ನದಿಗಳಲ್ಲಿ ಪ್ರವಾಹ ಉಂಟಾಗಿದೆ‌. ಮಂಚನಬೆಲೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದು, ನೀರಿನ ಹರಿವಿನಿಂದಾಗಿ ನದಿ ಸುತ್ತಲಿನ ಜಮೀನುಗಳು ಮುಳುಗಡೆ ಆಗಿವೆ. ಕಣ್ವ ನದಿ ಸುತ್ತಲಿನ ಗುಡ್ಡಗಳು ಕುಸಿಯುತ್ತಿವೆ. ಬಿಡದಿಯ ನಲ್ಲಿಗುಡ್ಡೆ ಸೇರಿದಂತೆ ಬಹುತೇಕ ಕೆರೆಗಳು ಭರ್ತಿ ಆಗಿದ್ದು, ಕೋಡಿ ನೀರು ರಸ್ತೆಗೆ ಹರಿದಿದೆ.

Share Post