ಬೆಂಗಳೂರಲ್ಲಿ ಭಾರತ್ ಜೋಡೋ ಪೂರ್ವಭಾವಿ ಸಭೆ; ದಿಗ್ವಿಜಯ್ ಸಿಂಗ್ ಭಾಗಿ
ಬೆಂಗಳೂರು; ರಾಹುಲ್ ಗಾಂಧಿ ನೇತೃತ್ವದಲ್ಲಿ ಇದೇ ಏಳನೇ ತಾರೀಖಿನಿಂದ ಭಾರತ್ ಜೋಡೋ ಯಾತ್ರೆ ಶುರುವಾಗಲಿದ್ದು, ಕರ್ನಾಟಕದಲ್ಲಿ 21 ದಿನಗಳ ಕಾಲ ಯಾತ್ರೆ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಯಾತ್ರೆಯ ಪೂರ್ವಭಾವಿ ಸಭೆ ನಡೆಯುತ್ತಿದೆ. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ.
ಸಭೆಯಲ್ಲಿ ಎಲ್ಲಾ ರಾಜ್ಯಗಳ ಕಾಂಗ್ರೆಸ್ ನಾಯಕರು ಕೂಡಾ ಪಾಲ್ಗೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಬೇಕಾದ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್ 7ರಂದು ಆರಂಭವಾಗುವ ಭಾರತ್ ಜೋಡೋ ಪಾದಯಾತ್ರೆ ತಿಂಗಳ ಕೊನೆಯಲ್ಲಿ ಕರ್ನಾಟಕವನ್ನು ಚಾಮರಾಜನಗರದ ಮೂಲಕ ಪ್ರವೇಶಿಸಲಿದೆ. 21 ದಿನಗಳ ಕಾಲ ಮಧ್ಯ ಕರ್ನಾಟಕದಲ್ಲಿ ಸಂಚರಿಸುವ ಪಾದಯಾತ್ರೆ ರಾಯಚೂರು ಮೂಲಕ ಮುಕ್ತಾಯವಾಗಲಿದೆ. ಈ ಪಾದಯಾತ್ರೆ ಒಟ್ಟಾರೆ ಯಶಸ್ಸಿಗೆ ಶ್ರಮಿಸುತ್ತಿರುವ ರಾಷ್ಟ್ರೀಯ ನಾಯಕರಿಗೆ ಬೆಂಬಲವಾಗಿ ನಿಂತಿರುವ ರಾಜ್ಯ ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿ ಈ ಯಾತ್ರೆಯನ್ನು ಯಶಸ್ವಿಗೊಳಿಸಿಕೊಡುವ ಭರವಸೆ ನೀಡಿದ್ದಾರೆ.