CrimeInternational

ದಾವೂದ್‌ ಸುಳಿವು ಕೊಟ್ಟವರಿಗೆ 25 ಲಕ್ಷ ನಗದು ಬಹುಮಾನ

ನವದೆಹಲಿ; ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುಳಿವು ಕೊಟ್ಟವರಿಗೆ 25 ಲಕ್ಷ ರೂಪಯಿ ನಗದು ಬಹುಮಾನ ನೀಡೋದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಘೋಷಿಸಿದೆ. ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರರು ಭಾರತದಲ್ಲಿ ನಕಲಿ ನೋಟು ಚಲಾವಣೆ ಹಾಗೂ ಡ್ರಗ್ಸ್, ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ಪಾಕ್ ಏಜೆನ್ಸಿಗಳು ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸೇರಿ ಭಾರತದ ಮೇಲೆ ದಾಳಿಗಳನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾವೂದ್‌ ಸುಳಿವು ಕೊಟ್ಟರೆ ಬಹುಮಾನ ನೀಡೋದಾಗಿ ಘೋಷಿಸಲಾಗಿದೆ.

ದಾವೂದ್ ಇಬ್ರಾಹಿಂ, ಆತನ ಸಹೋದರ ಅನೀಸ್ ಇಬ್ರಾಹಿಂ ಅಲಿಯಾಸ್ ಹಾಜಿ ಅನೀಸ್ ಹಾಗೂ ಆತನ ಸಹಾಯಕರಾದ ಛೋಟಾ ಶಕೀಲ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ, ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್‍ನ ಸುಳಿವು ನೀಡಿದವರಿಗೆ ಬಹುಮಾನವನ್ನು ಘೋಷಿಸಲಾಗಿದೆ. ಇಬ್ರಾಹಿಂ ತಲೆಗೆ 25 ಲಕ್ಷ ರೂಪಾಯಿ, ಛೋಟಾ ಶಕೀಲ್ ಸುಳಿವು ನೀಡಿದವರಿಗೆ 20 ಲಕ್ಷ ರೂಪಾಯಿ, ಅನೀಸ್, ಚಿಕ್ನಾ ಹಾಗೂ ಮೆಮನ್ ಸುಳಿವು ನೀಡಿದವರಿಗೆ ತಲಾ 15 ಲಕ್ಷ ರೂಪಾಯಿ ನೀಡೋದಾಗಿ ಎನ್‌ಐಎ ಸಂಸ್ಥೆ ಘೋಷಣೆ ಮಾಡಿದೆ.

ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಮತ್ತು 1993ರ ಮುಂಬೈ ಸರಣಿ ಸ್ಫೋಟ ಸೇರಿದಂತೆ ಭಾರತದಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ದಾವೂದ್ ಇಬ್ರಾಹಿಂ ತೊಡಗಿದ್ದ. ಈಗಾಗಲೇ 2003ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆತನ ತಲೆಗೆ 25 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿತ್ತು. ಭಾರತದ ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ಒಬ್ಬನಾದ ಆತ, ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಮುಖ್ಯಸ್ಥ ಹಫೀಜ್ ಸಯೀದ್, ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಹಿಜ್ಬುಲ್ ಮುಜಾಹಿದೀನ್ ಸಂಸ್ಥಾಪಕ ಸೈಯದ್ ಸಲಾಹುದ್ದೀನ್ ಮತ್ತು ಆತನ ಆಪ್ತ ಸಹಾಯಕ ಅಬ್ದುಲ್ ರೌಫ್ ಅಸ್ಗರ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ.

Share Post