Bengaluru

81 ಹೊಸ ಕೈಗಾರಿಕೆಗಳಿಗೆ ಅನುಮೋದನೆ; ಸಚಿವ ಮುರುಗೇಶ್‌ ನಿರಾಣಿ

ಬೆಂಗಳೂರು; ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲಾಗುತ್ತಿದ್ದು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸುಮಾರು 6,825ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಸುವ 2,689.51 ಕೋಟಿ ರೂ. ಮೌಲ್ಯದ 81 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್. ನಿರಾಣಿ ನೇತೃತ್ವದಲ್ಲಿ ನಡೆದ 132ನೇ ರಾಜ್ಯ ಮಟ್ಟದ ಏಕಗವಾಕ್ಷಿ ತೆರವು ಸಮಿತಿ ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಸಮಿತಿಯು 50 ಕೋಟಿ ರೂಪಾಯಿಗಿಂತ ಹೆಚ್ಚಿನ ಹೂಡಿಕೆಯ 7 ಪ್ರಮುಖ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳನ್ನು ಪರಿಗಣಿಸಿ ಅನುಮೋದನೆ ನೀಡಿದೆ. 1,229.43 ರೂ. ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 1,734 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಅಲ್ಲದೆ 132ನೇ ಎಸ್‍ಎಲ್‍ಎಸ್‍ಡಬ್ಲ್ಯುಸಿಸಿ ಸಭೆಯಲ್ಲಿ 15 ಕೋಟಿ ರೂ.ಗಿಂತ ಹೆಚ್ಚು ಹಾಗೂ 50 ಕೋಟಿ ರೂ.ಗಿಂತ ಕಡಿಮೆ ಹೂಡಿಕೆಯ 71 ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಹಾಗೂ 1,308.06 ಕೋಟಿ ರೂ. ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 5,091 ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

151.42 ಕೋಟಿ ರೂ. ಹೂಡಿಕೆಯ ಮೂರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 2,689.51 ಕೋಟಿ ರೂ.ಗಳ ಹೂಡಿಕೆಯೊಂದಿಗೆ 6,825 ಜನರಿಗೆ ಉದ್ಯೋಗಾವಕಾಶವಿರುವ ಒಟ್ಟು 81 ಯೋಜನೆಗಳಿಗೆ ಅನುಮತಿ ನೀಡಲಾಗಿದೆ.

ಅನುಮೋದನೆ ನೀಡಿರುವ ಪ್ರಸ್ತಾವನೆಗಳು:

೧. ಪರ್ಪಲ್‍ಸ್ಟಾರ್ ಹೈಜೀನ್ ಪ್ರೈವೇಟ್ ಲಿಮಿಟೆಡ್ – ಹೂಡಿಕೆ 270 ಕೋಟಿ ರೂ., ಉದ್ಯೋಗ – 400

೨. ಬೆಳಗಾವಿ ಶುಗರ್ಸ್ ಪ್ರೈವೇಟ್ 240.84 ಕೋಟಿ ರೂ. ಹೂಡಿಕೆ, 170 ಉದ್ಯೋಗ

೩. ಪರತ್ಪರ ಕಾಫಿ ಲಿಮಿಟೆಡ್ -236.8 ಕೋಟಿ ರೂ. ಹೂಡಿಕೆ, 200 ಉದ್ಯೋಗ

೪. ಲಾಜಿಕಲಿ ಇನ್ಫೋಮೀಡಿಯಾ ಪ್ರೈವೇಟ್ ಲಿಮಿಟೆಡ್- 228.19 ಕೋಟಿ ರೂ. ಹೂಡಿಕೆ, 614 ಉದ್ಯೋಗ

೫. ಎಎನ್‍ಎಸ್ ಪೇಪರ್ ಪ್ರೈವೇಟ್ ಲಿಮಿಟೆಡ್ -100 ಕೋಟಿ ರೂ. ಹೂಡಿಕೆ, 100 ಮಂದಿಗೆ ಉದ್ಯೋಗ

೬. ಗೋದಾವತ್ ಪುಡ್ ಪ್ರೋ ಪ್ರೈವೇಟ್ ಲಿಮಿಟೆಡ್ -98.60 ಕೋಟಿ ರೂ. ಹೂಡಿಕೆ, ಉದ್ಯೋಗ – 30

೭. ಜ್ಯೋತಿಸ್ನಾ ಲೈ-ಹೈಟೆಕ್ ಪ್ರೈವೇಟ್ ಲಿಮಿಟೆಡ್- 50 ಕೋಟಿ ರೂ. ಹೂಡಿಕೆ, ಜೊತೆಗೆ 220 ಉದ್ಯೋಗ

 

Share Post