ಮದುವೆಗೆ ಅಡ್ಡಿಯಾಯಿತು ಕುಜದೋಷ; ವಿಷ ಸೇವಿಸಿದ್ದ ಮಹಿಳಾ ಪೇದೆ ಸಾವು..!
ಶಿವಮೊಗ್ಗ; ನಿನಗೆ ಕುಜದೋಷವಿದೆ. ಹೀಗಾಗಿ ನನ್ನ ಮಗನನ್ನು ಮರೆತುಬಿಡು ಎಂದಿದ್ದರಿಂದಾಗಿ ವಿಚಳಿತಗೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಇಂದು ಸಾವನ್ನಪ್ಪಿದ್ದಾರೆ. ಮೃತ ಮಹಿಳಾ ಕಾನ್ಸ್ಟೇಬಲ್ ಸುಧಾ ಎಂದು ತಿಳಿದುಬಂದಿದೆ.
ಪೊಲೀಸ್ ಕಾನ್ಸ್ಟೇಬಲ್ ಸುಧಾ ಭದ್ರಾವತಿ ತಾಲೂಕಿನ ಕಲ್ಲಾಪುರ ನಿವಾಸಿಯಾಗಿದ್ದಾರೆ. ಇನ್ನು ಇವರು ಭದ್ರಾವತಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಾಗಿರುವ ಬೆಳಗಾವಿ ಮೂಲದ ಪ್ರವೀಣ್ ಅವರನ್ನು ಆರು ವರ್ಷದಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮೊದಲಿಗೆ ಜಾತಿ ಅಡ್ಡವಾಗಿತ್ತು. ಅನಂತರ ಪ್ರವೀಣ್ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಯೊಬ್ಬರಿಗೆ ತೋರಿಸಿದ್ದರು. ಜ್ಯೋತಿಷಿ ಈ ಯುವತಿಗೆ ಕುಜ ದೋಷ ಇದೆ. ಇವಳೊಂದಿಗೆ ವಿವಾಹವಾದರೆ ನಿಮ್ಮ ಮಗನ ಆಯಸ್ಸು ಕಡಿಮೆ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಕುಜ ದೋಷ ಇರುವ ಹುಡುಗಿ ಜೊತೆ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಪ್ರವೀಣ್ ತಾಯಿ ತಿಳಿಸಿದ್ದರು.
ಇದರಿಂದ ಮನನೊಂದ ಪ್ರೇಮಿಗಳಿಬ್ಬರೂ ಮೇ ೩೧ರಂದು ಭದ್ರಾವರಿ ಎಪಿಎಂಸಿ ಆವರಣದಲ್ಲಿ ವಿಷ ಸೇವಿಸಿದ್ದರು,. ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಸುಧಾಳ ಆರೋಗ್ಯ ಕ್ಷೀಣಿಸಿದ್ದರಿಂದ ಮಣಿಪಾಲ್ ಆಸ್ಪತ್ರೆ ದಾಖಲಿಸಲಾಗಿತ್ತು. ಆದ್ರೆ ಕಳೆದ ರಾತ್ರಿ ಚಿಕಿತ್ಸೆ ಫಲಿಕಾರಿಯಾಗದೆ ಸುಧಾ ಮೃತಪಟ್ಟಿದ್ದಾರೆ.