BengaluruDistrictsPolitics

Amith Sha; ಏಕಾಏಕಿ ಅಮಿತ್‌ ಶಾ ಪ್ರಚಾರ ಕಾರ್ಯಕ್ರಮಗಳು ರದ್ದು; ಕಾರಣ ಏನು ಗೊತ್ತಾ..?

ಬೆಂಗಳೂರು; ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಬಿಜೆಪಿ ಪರ ಮತಬೇಟೆ ನಡೆಸಿದ್ದರು. ಎಲ್ಲಡೆ ಅಬ್ಬರದ ಪ್ರಚಾರ ನಡೆಸಿ, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸಿದ್ದರು. ಇಂದು ಕೂಡಾ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಅವರ ಪ್ರಚಾರ ಕಾರ್ಯಕ್ರಮಗಳಿದ್ದವು. ಆದ್ರೆ ದಿಢೀರ್‌ ಅಂತ ಅಮಿತ್‌ ಶಾ ಅವರ ಕಾರ್ಯಕ್ರಮಗಳು ರದ್ದಾಗಿವೆ. ಅಮಿತ್‌ ಶಾ ದೆಹಲಿಗೆ ವಾಪಸ್ಸಾಗಿದೆ.

ಅಮಿತ್‌ ಶಾ ಅವರ ಕಾರ್ಯಕ್ರಮಗಳು ರದ್ದಾಗಲು ಕಾರಣ ಬೇರೇನೂ ಇಲ್ಲ. ಮಣಿಪುರದಲ್ಲಿ ಗಲಭೆಯಾಗುತ್ತಿರುವುದೇ ಇದಕ್ಕೆ ಕಾರಣ. ಮಣಿಪುರದಲ್ಲಿ ಭಾರಿ ಗಲಭೆಗಳು ನಡೆಯುತ್ತಿದ್ದರೂ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಿಗಳು ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಆಕ್ರೋಶಗಳು ವ್ಯಕ್ತವಾಗಿದ್ದರು. ಕಾಂಗ್ರೆಸ್‌ ಕೂಡಾ ಟ್ವೀಟ್‌ ಮಾಡಿ ಈ ಬಗ್ಗೆ ಆಕ್ರೋಶ ಹೊರಹಾಕಿತ್ತು. ಈ ಬೆನ್ನಲ್ಲೇ ಅಮಿತ್‌ ಶಾ ಅವರು ಪ್ರಚಾರ ಸಭೆಗಳನ್ನು ರದ್ದು ಮಾಡಿದ್ದಾರೆ. ಮಣಿಪುರಕ್ಕೆ ತೆರಳಲಿದ್ದಾರೆ.

ಅಮಿತ್‌ ಶಾ ಅವರು ಇಂದು ರಾಯಚೂರು ಗ್ರಾಮೀಣ ಕ್ಷೇತ್ರ ಹಾಗೂ ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕಿತ್ತು. ಆದ್ರೆ ಅಮಿತ್‌ ಶಾ ಭೇಟಿ ರದ್ದಾಗಿದ್ದರೂ ಕಾರ್ಯಕ್ರಮ ನಡೆಯಲಿವೆ. ರಾಜ್ಯ ನಾಯಕರು ಇಂದು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಯಾಪಲದಿನ್ನಿ ಹಾಗೂ ಮಸ್ಕಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ. ತೆಲುಗು ನಟ ಹಾಗೂ ಜನಸೇನಾ ಅಧ್ಯಕ್ಷ ಪವನ್‌ ಕಲ್ಯಾಣ್‌ ಕೂಡಾ ಆಗಮಿಸುವ ಸಾಧ್ಯತೆ ಇದೆ.

ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಇಂದು ಅಮಿತ್‌ ಶಾ ರೋಡ್‌ ಶೋ ನಡೆಸಬೇಕಿತ್ತು. ಕಾರಟಗಿ, ಕುಷ್ಟಗಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಲ್ಲಿ ಅಮಿತ್‌ ಶಾ ಅನುಪಸ್ಥಿತಿಯಲ್ಲಿ ಕೇಂದ್ರ ಸಚಿವ ಮುನ್ಸೂಖ್ ಮಾಂಡವೀಯ, ಬಸನಗೌಡ ಪಾಟೀಲ ಯತ್ನಾಳ್  ರೋಡ್‌ ಶೋ ನಡೆಸಲಿದ್ದಾರೆ.

Share Post