ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದೆ. ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರಾಗಿರುವ ಪ್ರತಾಪ್ ರೆಡ್ಡಿಯವರು ಈ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಅನುಮಾನ ಮೂಡಿದ್ದು, ಈ ಹಿನ್ನೆಲೆಯಲ್ಲಿ ಖಡಕ್ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ಸಂತೋಷ್ ದೇಶದಲ್ಲಿ ನಿಷೇಧಿತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ನಿಷೇಧಿತ ಕ್ರಿಮಿನಾಶಕ ಖರೀದಿಸಿದ್ದು ಎಲ್ಲಿ? ನಿಷೇಧಿತ ಕ್ರಿಮಿನಾಶಕ ಯಾರು ಪೂರೈಸಿದರು ಎಂಬುದರ ಬಗ್ಗೆ ಒಂದು ತಂಡ ತನಿಖೆ ನಡೆಸುತ್ತಿದೆ. ಇದರ ಜತೆಗೆ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಹಿಂದಿನ ದಿನ ತಂಗಿದ್ದ ಚಿಕ್ಕಮಗಳೂರಿನ ಹೋಮ್ ಸ್ಟೇ ಗೆ ತೆರಳಿರುವ ಪೊಲೀಸರ ತಂಡ ಅಲ್ಲೂ ಕೂಡಾ ಮಹತ್ವದ ಮಾಹಿತಿ ಕಲೆ ಹಾಕಿದೆ. ಇಲ್ಲೂ ಕೂಡಾ ಸಂತೋಷ್ ಜತೆ ಬಂದಿದ್ದ ಇಬ್ಬರ ಸ್ನೇಹಿತರು ಜತೆಗಿದ್ದರೇ ? ಯಾರ ಹೆಸರಿನಲ್ಲಿ ಹೋಮ್ ಸ್ಟೇ ಬುಕ್ ಮಾಡಲಾಗಿತ್ತು ಎಂಬ ತನಿಖೆ ಮಾಡಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಸಂತೋಷ್ ಪಾಟೀಲ್ ಗೆ ಹೋಮ್ ಸ್ಟೇ ನ್ನು ನವೀನ್ ಹೆಸರಿನಲ್ಲಿ ಬುಕ್ ಮಾಡಲಾಗಿದೆ. ನವೀನ್ ಯಾರು ? ಆತ ಯಾಕೆ ತನ್ನ ಹೆಸರಿನಲ್ಲಿ ಬುಕ್ ಮಾಡಿದ ಎಂಬುದರ ಬಗ್ಗೆ ಪೊಲೀಸರು ಹೋಮ್ ಸ್ಟೇ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಾದೇಶ ಮತ್ತು ರಮೇಶ್ ಇಬ್ಬರು ಸ್ನೇಹಿತರೊಂದಿಗೆ ಸಂತೋಷ್ ಪಾಟೀಲ್ ಒಂದೇ ಕೊಠಡಿಯಲ್ಲಿ ತಂಗಿದ್ದರು. ಆದರೆ, ಉಡುಪಿ ಶಾಂಭವಿ ಹೋಟೆಲ್ ನಲ್ಲಿ ಪ್ರತ್ಯೇಕವಾಗಿ ತಂಗಿದ್ದು, ಇದರ ಸುತ್ತ ನಾನಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.