BengaluruPolitics

ಅಲ್ಲಿ ಬಿಜೆಪಿ ಕಾರ್ಯಕಾರಿಣಿ; ಗೈರಾದ ಬಿಜೆಪಿ ಶಾಸಕ ಸಿದ್ದರಾಮಯ್ಯ ಕಾರಿನಲ್ಲಿ ಪ್ರತ್ಯಕ್ಷ!

ಬೆಂಗಳೂರು; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯುತ್ತಿದೆ. ಆದ್ರೆ ಈ ಸಭೆಯಿಂದ ಶಾಸಕ ಎಸ್‌.ಟಿ.ಸೋಮಶೇಖರ್‌ ದೂರವೇ ಉಳಿದಿದ್ದಾರೆ. ಬೆಂಗಳೂರಿನಲ್ಲೇ ಇದ್ದರೂ ಪಕ್ಷದ ಸಭೆಗೆ ಗೈರಾಗಿದ್ದಾರೆ. ಇಷ್ಟೇ ಆಗಿದ್ದರೆ ಏನೋ ಅಂದುಕೊಳ್ಳಬಹುದಿತ್ತು. ಆದ್ರೆ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಪಕ್ಷದ ಸಭೆಗೆ ಹೋಗದೇ ಸಿಎಂ ಸಿದ್ದರಾಮಯ್ಯ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಅನುಮಾನಕ್ಕೆ ಇದು ಮತ್ತಷ್ಟು ಪುಷ್ಠಿ ಕೊಟ್ಟಂತಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೋದವರನ್ನು ಬಿಜೆಪಿ ವಾಪಸ್‌ ಕರೆಯುತ್ತಿದೆ. ಈಗಾಗಲೇ ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ವಾಪಸ್‌ ಹೋಗಿದ್ದಾರೆ. ಸವದಿಗೂ ಬಿಜೆಪಿ ನಾಯಕರು ಬಲೆ ಬೀಸಿದ್ದಾರೆ. ಹೀಗಿರುವಾಲೇ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಸಿಎಂ ಸಿದ್ದರಾಮಯ್ಯ ಕಾರಿನಲ್ಲಿ ಕಾಣಿಸಿಕೊಂಡಿದಾರೆ.
ಬೆಂಗಳೂರಿನ ನೈಸ್ ರಸ್ತೆ ಬಳಿಯ ಕಾರ್ಯಕ್ರಮಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರು ಶಕ್ತಿ ಭವನಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ಸಿಎಂ ಕಾರಿನಲ್ಲಿಯೇ ಸೋಮಶೇಖರ್‌ ಪ್ರಯಾಣ ಮಾಡಿದ್ದಾರೆ. ಇದೇ ವೇಳೆ ಪ್ರತಿಕ್ರಿಯೆ ಕೊಟ್ಟಿರುವ ಶಾಸಕ ಸೋಮಶೇಖರ್‌, ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯುತ್ತಿರುವುದು ನನಗೆ ಗೊತ್ತಿಲ್ಲ. ನನಗೆ ಯಾವುದೇ ಆಹ್ವಾನವೂ ಕೊಟ್ಟಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Share Post