ಕೊವಿಡ್ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು..?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ 19 ಪರಿಸ್ಥಿತಿ ಕುರಿತ ಉನ್ನತ ಮಟ್ಟದ ಸಭೆಯ ಮುಖ್ಯಾಂಶಗಳು:
* ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿರುವ ಹಾಗೂ ಬೆಂಗಳೂರಿನಲ್ಲಿ ಕೋವಿಡ್‌ನಿಂದಾಗಿ ಕಳೆದ ಮೂರು ದಿನಗಳಲ್ಲಿ ಮೂವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ಸ್ಥಿತಿಗತಿಯ ಕುರಿತು ಚರ್ಚಿಸಲು ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಇಂದು ಉನ್ನತ ಮಟ್ಟದ ಸಭೆ ನಡೆಸಲಾಯಿತು.
• ಕೋವಿಡ್ 19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಅದರಲ್ಲೂ JN.1 ಎಂಬ ಹೊಸ ತಳಿಯ ವೈರಸ್ ಪತ್ತೆಯಾಗಿದೆ.
• ಕಳೆದ ಒಂದು ವಾರದ ಅವಧಿಯಲ್ಲಿ ಜಾಗತಿಕವಾಗಿ 51,214 ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಪ್ರತಿದಿನ ಸರಾಸರಿ 310 ಪ್ರಕರಣಗಳು ವರದಿಯಾಗುತ್ತಿವೆ.
• ಕರ್ನಾಟಕದಲ್ಲಿ ಪ್ರಸ್ತುತ 92 Active COVID Cases ವರದಿಯಾಗಿವೆ. ಕೇರಳದಲ್ಲಿ 2041, ತಮಿಳು ನಾಡಿನಲ್ಲಿ 77, ಮಹಾರಾಷ್ಟ್ರದಲ್ಲಿ 35, ಗೋವಾದಲ್ಲಿ 23 ಹಾಗೂ ಗುಜರಾತಿನಲ್ಲಿ 12 Active cases ಇವೆ.
• ರಾಜ್ಯದಲ್ಲಿರುವ ಒಟ್ಟು 92 Active COVID Case ಗಳಲ್ಲಿ 80 ಬೆಂಗಳೂರು ನಗರದಲ್ಲಿ ಇದೆ. ಉಳಿದಂತೆ ಮೈಸೂರಿನಲ್ಲಿ 5, ಬಳ್ಳಾರಿಯಲ್ಲಿ 3, ರಾಮನಗರ ಹಾಗೂ ಮಂಡ್ಯದಲ್ಲಿ ತಲಾ 1 ಪ್ರಕರಣ ವರದಿಯಾಗಿದೆ.
• ಇವರಲ್ಲಿ 72 ಜನ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ. (Home Isolation). 20 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಳು ಜನರು ಐಸಿಯುನಲ್ಲಿದ್ದು, ಇವರೆಲ್ಲರೂ ಇತರ ಸಮಸ್ಯೆಗಳಿಂದಲೂ ಬಳಲುತ್ತಿದ್ದಾರೆ.
• ರಾಜ್ಯದಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 5000 ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ 1500 Rapid Antigen Test ಹಾಗೂ 3500 RTPCR ಪರೀಕ್ಷೆಗಳಾಗಿವೆ. ಬೆಂಗಳೂರು ನಗರದಲ್ಲಿ 1000 ಪರೀಕ್ಷೆಗಳನ್ನು ನಡೆಸಲಾಗುವುದು. ಗಡಿ ಭಾಗಗಳಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುವುದು.
• ಕರ್ನಾಟಕದಲ್ಲಿ ಡಿಸೆಂಬರ್ 15 ರಂದು ಒಂದು ಹಾಗೂ ಡಿಸೆಂಬರ್ 20 ರಂದು ಎರಡು ಸಾವುಗಳು ಸಂಭವಿಸಿವೆ. ಈ ಮೂರು ಪ್ರಕರಣಗಳಲ್ಲಿ ಎಲ್ಲರೂ ಇತರ ಆರೋಗ್ಯ ಸಮಸ್ಯೆಗಳಿಂದ (Co-Morbidity) ಬಳಲುತ್ತಿದ್ದರು.
• ಅದಾಗ್ಯೂ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಬೇಕಾಗಿದೆ. ಕೋವಿಡ್ 19 ಈಗ Pandemic ಆಗಿ ಉಳಿದಿಲ್ಲ. Endemic ಆಗಿದೆ.
• ಸರ್ಕಾರವೂ ಸಹ ಎಲ್ಲ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಿದೆ.
• ಮೃತರಾದವರು, Co-morbidity ಇರುವವರು, ಒಂದೇ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಪ್ರಕರಣಗಳು ವರದಿಯಾದ ಸಂದರ್ಭದಲ್ಲಿ, ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದವರ ಜಿನೋಮ್ ಸಿಕ್ವೆನ್ಸಿಂಗ್ ಮಾಡಲಾಗುತ್ತಿದೆ.
*ತಾಂತ್ರಿಕ ಸಲಹಾ ಸಮಿತಿಯು ನೀಡಿರುವ ಸಲಹೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅದರಂತೆ ಈ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಯಿತು:*
• ಹಿಂದಿನ ಕೋವಿಡ್ ಅಲೆಗಳ ಸಂದರ್ಭದಲ್ಲಿ ನಡೆದ ತಪ್ಪುಗಳು ಈ ಬಾರಿ ಆಗಬಾರದು. ಆಕ್ಸಿಜನ್, ವೆಂಟಿಲೇಟರ್, ಬೆಡ್‌ಗಳು ಯಾವುದಕ್ಕೂ ತೊಂದರೆ ಆಗಬಾರದು. ಕಳೆದ ಬಾರಿ ತೊಂದರೆ ಆಗಿ ಹಲವಾರು ಜನ ಮೃತಪಟ್ಟರು. ಆಕ್ಸಿಜನ್ ಲಭ್ಯತೆಯನ್ನು ಖಾತರಿ ಪಡಿಸಬೇಕು.
• ಇದಕ್ಕೆ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸನ್ನದ್ಧವಾಗಿ ಇವು ಯಾವುದೂ ಕೊರತೆಯಾಗದಂತೆ ನೋಡಿಕೊಳ್ಳಬೇಕು.
• ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನು ಪಾಲಿಸಬೇಕು.
• ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕು.
• ಕೋವಿಡ್ ನ ಸಮರ್ಪಕ ನಿರ್ವಹಣೆ ಹಾಗೂ ಪಾರದರ್ಶಕತೆಗಾಗಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.
• ಎಲ್ಲ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲಾಗಿದೆ. ಎಲ್ಲ ಆಸ್ಪತ್ರೆಗಳೂ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು ಸಿದ್ಧತೆ ನಡೆಸಿಕೊಳ್ಳಲು ಸೂಚಿಸಲಾಗಿದೆ.
ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳು ಹಾಗೂ ರಾಜ್ಯದಲ್ಲಿ ಹೊರಡಿಸಿರುವ ಮಾರ್ಗಸೂಚಿಗಳು
• 60 ವರ್ಷ ಮೇಲ್ಪಟ್ಟ ಎಲ್ಲರೂ, ಕಿಡ್ನಿ, ಹೃದಯ, ಲಿವರ್ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿ ಹಾಗೂ ಬಾಣಂತಿಯರು ಮಾಸ್ಕ್ ಧರಿಸುವುದು ಹಾಗೂ ಮುಚ್ಚಿದ, ಹೆಚ್ಚು ಗಾಳಿಯಾಡದ ಸ್ಥಳಗಳಿಗೆ ಹಾಗೂ ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡದೆ ಇರುವುದು.
• ಉಸಿರಾಟದ ಸಮಸ್ಯೆಯ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ನೆಗಡಿ ಇತ್ಯಾದಿಗಳಿಂದ ಬಳಲುತ್ತಿರುವವರು ಕೂಡಲೇ ವೈದ್ಯಕೀಯ ಸಮಾಲೋಚನೆ ನಡೆಸುವುದು ಹಾಗೂ ಮಾಸ್ಕ್ ಧರಿಸುವುದು.
• ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡುವುದು. ಅನಾರೋಗ್ಯ ಪೀಡಿತರಾದರೆ ಮನೆಯಲ್ಲೇ ಇರಿ ಹಾಗೂ ಇತರರೊಂದಿಗೆ ಸಂಪರ್ಕವನ್ನು ಕಡಿಮೆ ಮಾಡಿ.
• ಜನಸಂದಣಿಯ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಉತ್ತಮ.
• ವಿದೇಶ ಪ್ರವಾಸದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು.
• ಭಾರತ ಸರ್ಕಾರವೂ ಮಾರ್ಗಸೂಚಿಗಳನ್ನು ಹೊರಡಿಸಿದೆ.
• ರಾಜ್ಯವೂ ಕೇರಳ ಮತ್ತು ತಮಿಳು ನಾಡು ಗಡಿ ಭಾಗದಲ್ಲಿ ಜ್ವರದ ಪ್ರಕರಣಗಳ ಮೇಲೆ ನಿಗಾ ವಹಿಸಿ, ಪರೀಕ್ಷೆ ಮತ್ತು ವರದಿ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
• ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಸಿರಾಟದ ತೊಂದರೆ ಮತ್ತು 20 ರಲ್ಲಿ 1 ಜ್ವರ (ILI) ದ ಪ್ರಕರಣಗಳಲ್ಲಿ ಪರೀಕ್ಷೆ ಕಡ್ಡಾಯವಾಗಿ ಮಾಡಲು ಸೂಚಿಸಿದೆ.