BengaluruPolitics

ಭಾರತ್‌ ಜೋಡೋ ಯಾತ್ರೆ ಯಶಸ್ಸಿಗೆ ವಿವಿಧ ಸಮಿತಿಗಳ ರಚನೆ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ರಾಹುಲ್‌ ಗಾಂಧಿ ನಡೆಸುತ್ತಿರುವ ಭಾರತ್‌ ಜೋಡೋ ಯಾತ್ರೆ ರಾಜ್ಯದಲ್ಲಿ 21 ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್‌ 30ಕ್ಕೆ ಯಾತ್ರೆಗೆ ರಾಜ್ಯಕ್ಕೆ ಬರಲಿದ್ದು, ಕೆಪಿಸಿಸಿ ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಯಾತ್ರೆಯನ್ನು ಯಶಸ್ವಿಗೊಳಿಸಲು ಪಕ್ಕಾ ಪ್ಲ್ಯಾನ್‌ ಮಾಡಲಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದ್ದಾರೆ. 

   ವಿವಿಧ ಸಮಿತಿಗಳ ರಚನೆ

ಭಾರತ್‌ ಜೋಡೋ ಯಾತ್ರೆಯನ್ನು ಸುಸೂತ್ರವಾಗಿ ನಡೆಸುವುದುಕ್ಕಾಗಿ ಕೆಪಿಸಿಸಿ ವಿವಿಧ ಸಮಿತಿಗಳನ್ನು ರಚನೆ ಮಾಡಿದೆ. ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಶಾಸಕ ರಾಮಲಿಂಗಾರೆಡ್ಡಿಯವರಿಗೆ ಪ್ರಚಾರದ ಜವಾಬ್ದಾರಿಯನ್ನು ನೀಡಲಾಗಿದೆ. ಇನ್ನು ಬಳ್ಳಾರಿಯಲ್ಲಿ ನಡೆಯುವ ಬೃಹತ್‌ ಸಮಾವೇಶದ ಜವಾಬ್ದಾರಿಯನ್ನು ಕೂಡಾ ಪ್ರಚಾರ ಸಮಿತಿಗೇ ನೀಡಲಾಗಿದೆ. ಎಚ್‌.ಎಂ.ರೇವಣ್ಣ ಅವರು ಸಂಚಾರ ವ್ಯವಸ್ಥೆಯನ್ನು ನೋಡಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ ವೇಳೆ ನಡೆಯುವ ಪ್ರತಿನಿತ್ಯ ನಡೆಯುವ ಸಭೆಗಳ ಜವಾಬ್ದಾರಿಯನ್ನು ಮಾಜಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಸಮಿತಿಗೆ ನೀಡಲಾಗಿದೆ.

ವಾಸ್ತವ್ಯ ವ್ಯವಸ್ಥೆಯನ್ನು ದಿನೇಶ್ ಗುಂಡೂರಾವ್ ಅವರ ಸಮಿತಿ ನೋಡಿಕೊಳ್ಳಲಿದೆ. ಮೈಸೂರು ಚಾಮರಾಜನಗರ ಭಾಗದ ಉಸ್ತುವಾರಿಯನ್ನು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಸಮಿತಿ‌ ನೋಡಿಕೊಳ್ಳಲಿದೆ. ಮೈಸೂರು ನಗರದ ಉಸ್ತುವಾರಿ ಮಹದೇವಪ್ಪ ಹಾಗೂ ಯತೀಂದ್ರ ಅವರಿಗೆ ನೀಡಲಾಗಿದೆ.  ಮಂಡ್ಯ ಭಾಗದ ಉಸ್ತುವಾರಿ ಚಲುವರಾಯಸ್ವಾಮಿ, ತುಮಕೂರು ಭಾಗಕ್ಕೆ ಪರಮೇಶ್ವರ್, ಚಳ್ಳಕೆರೆ ಭಾಗದಲ್ಲಿ ಸಲೀಂ ಅಹ್ಮದ್ ಅವರು ಸ್ಥಳೀಯ ಶಾಸಕರ ನೆರವಿನೊಂದಿಗೆ ನಿಭಾಯಿಸಲಿದ್ದಾರೆ. ರಾಯಚೂರು ಉಸ್ತುವಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ನೋಡಿಕೊಳ್ಳುತ್ತಾರೆ.

ಇನ್ನು ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರ ಸಂಘಟನೆಗೆ ಐದಾರು ತಂಡಗಳನ್ನು ರಚಿಸಲಾಗಿದೆ. ಗಾಂಧಿ ಜಯಂತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಿರಿಯ ನಾಯಕ ಬಿ.ಎಲ್. ಶಂಕರ್ ಅವರಿಗೆ ಉಸ್ತುವಾರಿ ನೀಡಲಾಗಿದೆ. ಉಳಿದ ಜವಾಬ್ದಾರಿಗಳನ್ನು ಕಾಂಗ್ರೆಸ್‌ನ ಬೇರೆ ಬೇರೆ ಶಾಸಕರುಗಳು ನೋಡಿಕೊಳ್ಳಲಿದ್ದಾರೆ.

ನಿನ್ನೆ ಸಭೆಯಲ್ಲಿ ಏನಾಯ್ತು..?

ನಿನ್ನೆ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ಬೇರೆಯವರು ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು ಎಂದು ಹೇಳಲಾಗಿತ್ತು. ಇದಕ್ಕೆ ಡಿ.ಕೆ.ಶಿವಕುಮಾರ್‌ ಸ್ಪಷ್ಟೀಕರಣ ನೀಡಿದ್ದಾರೆ. ನಮ್ಮ ನಾಯಕರು ಸ್ಪಂದಿಸುತ್ತಿಲ್ಲ ಎಂದು ಹೇಳಿದವರು ಯಾರು? ಎಂದು ಪ್ರಶ್ನಿಸಿರುವ ಡಿ.ಕೆ.ಶಿವಕುಮಾರ್‌, ಎಲ್ಲರೂ ನನಗೆ ಸ್ಪಂದಿಸುತ್ತಿದ್ದಾರೆ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನನ್ನ ವೇಗ ಹೆಚ್ಚಾಗಿರಬಹುದು. ಕೆಲವರಿಗೆ ಅವರ ಕ್ಷೇತ್ರದಲ್ಲಿನ ಜವಾಬ್ದಾರಿ ಹೆಚ್ಚಾಗಿದೆ. ಎಲ್ಲವನ್ನೂ ನನ್ನಿಂದಲೇ ಮಾಡಲು ಆಗುವುದಿಲ್ಲ. ನಮ್ಮ ನಾಯಕರು ಅವರವರ ಕೆಲಸ ಮಾಡುತ್ತಿದ್ದಾರೆ. ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿ ಕ್ಷೇತ್ರಕ್ಕೂ ಹೋಗಬೇಕು, ಪ್ರಧಾನ ಕಾರ್ಯದರ್ಶಿಗಳು ಪ್ರತಿ ಪಂಚಾಯ್ತಿಗೆ ಹೋಗುವ ಜವಾಬ್ದಾರಿ ನೀಡಿದ್ದೇವೆ. ಆ ಪ್ರಕಾರ ಅವರು ಸಂಘಟನೆ ಮಾಡಬೇಕು. ಸಂಘಟನೆ ಇಲ್ಲದೇ ಯಶಸ್ಸು ಸಿಗುವುದಿಲ್ಲ  ಎಂದು ಸ್ಪಷ್ಟಪಡಿಸಿದರು.

ನನಗೆ ಅಸಹಕಾರದ ನೋವಿಲ್ಲ. ಸರ್ಕಾರ ಅಧಿವೇಶನ ಕರೆದಾಗ ಕೇವಲ ವಿರೋಧ ಪಕ್ಷದ ನಾಯಕರೇ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಅವರಿಗೆ ನಾನು ಸೇರಿದಂತೆ 69 ಶಾಸಕರ ಸಹಕಾರ ಇರಬೇಕು. ಇನ್ನು ಸರ್ಕಾರದ ಪರ ನೂರಕ್ಕೂ ಹೆಚ್ಚು ಶಾಸಕರಿದ್ದರೂ ಸಚಿವರುಗಳು ಅಧಿವೇಶನಕ್ಕೆ ಬರುತ್ತಿಲ್ಲ. ಅವರು ಸರ್ಕಾರದ ಸಾಧನೆ ಕಾರ್ಯಕ್ರಮ ಮಾಡಿದಾಗ ಎಷ್ಟು ಜನ ಸಚಿವರು ಹೋಗಿದ್ದರು? ಏನಾಯ್ತು? ಎಷ್ಟು ಜನ ಇದ್ದರು..? ಯಡಿಯೂರಪ್ಪ ಅವರ ಭಾಷಣ ಮುಗಿದ ನಂತರ ಎಲ್ಲರೂ ಖಾಲಿ ಆದರು. ಇದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅದನ್ನು ಅಸಹಕಾರ ಚಳವಳಿ ಎನ್ನುತ್ತೀರಾ? ನಾನು ನಮ್ಮ ಪದಾಧಿಕಾರಿಗಳಿಗೆ ಅವರ ಜವಾಬ್ದಾರಿ ತಿಳಿಸಿದ್ದೇನೆ ಅಷ್ಟೇ ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು.

ಇನ್ನು ಭಾರತ್‌ ಜೋಡೋ ಯಾತ್ರೆಗೆ ಪ್ರಿಯಾಂಕಾ ಗಾಂಧಿ ಆಗಮಿಸುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಪಾದಯಾತ್ರೆಗೆ ಆಗಮಿಸುತ್ತಾರೆ ಎಂಬ ಸುದ್ದಿ ಇದೆ. ಬಹುತೇಕ ರಾಷ್ಟ್ರೀಯ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ತಿಳಿಸಿದರು.

ಇನ್ನು ಇಡಿ ನೋಟಿಸ್‌ ನೀಡಿರುವ ಬಗ್ಗೆ ಪ್ರಶ್ನೆ ಮಾಡಿದ ಅವರು,  ಮೈಸೂರು ಪ್ರವಾಸ ಮುಗಿಸಿದ ಬಳಿಕ ದೆಹಲಿಗೆ ಹೋಗಿ ಇಡಿ ತನಿಖೆ ಎದುರಿಸುತ್ತೇನೆ. ಅವರು ಯಾವ ಕಾರಣಕ್ಕೆ ಕರೆದಿದ್ದಾರೆ ಎಂದು ಗೊತ್ತಿಲ್ಲ. ಅಲ್ಲಿಗೆ ಹೋಗಿ ವಿಚಾರ ತಿಳಿಯುತ್ತೇನೆ ಎಂದು ಹೇಳಿದ್ದಾರೆ.  ಅಧಿವೇಶನದ ಹೆಸರಿನಲ್ಲಿ ವಿಚಾರಣೆಯಿಂದ ವಿನಾಯಿತಿ ಕೇಳಬಹುದು. ಕೇಳಿದರೆ ನಾನು ಪಲಾಯನ ಮಾಡಿದಂತೆ ಆಗುತ್ತದೆ. ನಾನು ಪಲಾಯನ ಮಾಡುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಯಾವುದೇ ಹಗರಣ ಇಲ್ಲ. ಹೀಗಾಗಿ ನಾನು ಹೋಗುತ್ತೇನೆ  ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.

 

Share Post