Politics

ಗುರು ರವಿದಾಸ್‌ ಜಯಂತಿ ಹಿನ್ನೆಲೆ; ಆರು ದಿನ ಚುನಾವಣೆ ಮುಂದೂಡಲು ಪಂಜಾಬ್‌ ಸಿಎಂ ಮನವಿ

ಚಂಡಿಗಢ: ಗರು ರವಿದಾಸ್‌ ಜಯಂತಿ ಸಮಯದಲ್ಲೇ ಪಂಜಾಬ್‌ನಲ್ಲಿ ಮತದಾನ ನಡೆಯಲಿದ್ದು, ಇದ್ರಿಂದ ಮತದಾರರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಆರು ದಿನವಾದರೂ ಮತದಾನ ಮುಂದೂಡುವಂತೆ ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಅವರು ಅಧಿಕೃತವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಕೂಡಾ ಬರೆದಿದ್ದಾರೆ.

ಅಂದಹಾಗೆ ಪಂಜಾಬ್‌ ರಾಜ್ಯದಲ್ಲಿ 117 ವಿಧಾನಸಭಾ ಕ್ಷೇತ್ರಗಳಿವೆ. ಎಲ್ಲಾ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಮತದಾನ ನಡೆಯಲಿದೆ. ಆದರೆ ಸಿಖ್ಖರು ಆರಾಧಿಸುವ ಗುರು ರವಿದಾಸ್‌ ಅವರ ಜಯಂತಿ ಕಾರ್ಯಕ್ರಮಗಳು ಫೆಬ್ರವರಿ 10 ರಿಂದ 16ರವರೆಗೆ ನಡೆಯಲಿವೆ. ಈ ಸಂದರ್ಭದಲ್ಲಿ 20 ಲಕ್ಷಕ್ಕೂ ಅಧಿಕ ಮತದಾರರು ಉತ್ತರ ಪ್ರದೇಶದ ಬನಾರಸ್‌ಗೆ ತೆರಳಲಿದ್ದಾರೆ. ಹೀಗಾಗಿ ಅವರೆಲ್ಲಾ ಮತದಾನದಿಂದ ವಂಚಿತರಾಗುತ್ತಾರೆ ಎಂಬುದು ಪಂಜಾಬ್‌ ಸಿಎಂ ವಾದ.

ಬಿಎಸ್‌ಪಿ ಪಕ್ಷ ಕೂಡಾ ಇದೇ ಕಾರಣ ನೀಡಿ ಚುನಾವಣೆ ಮುಂದೂಡುವಂತೆ ಮನವಿ ಮಾಡಿತ್ತು. ಇದೀಗ ಪಂಜಾಬ್‌ ಸಿಎಂ ಚನ್ನಿ ಕೂಡಾ ಮನವಿ ಮಾಡಿದ್ದಾರೆ. ಆದ್ರೆ ಕೇಂದ್ರ ಚುನಾವಣಾ ಆಯೋಗ ಇನ್ನೂ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.

Share Post