BengaluruPolitics

ಬಿಜೆಪಿ-ಜೆಡಿಎಸ್‌ ಮೈತ್ರಿ; ಲೋಕಸಭೆಯಲ್ಲಿ ಬಿಜೆಪಿಗೆಷ್ಟು ಲಾಭ..? ಜೆಡಿಎಸ್‌ಗೆಷ್ಟು ಲಾಭ..?

ಬೆಂಗಳೂರು; ಜೆಡಿಎಸ್‌ ಆಟ ನಡೆಯೋದು ಹಳೇ ಮೈಸೂರು ಭಾಗದಲ್ಲಿ ಮಾತ್ರ… ಜೆಡಿಎಸ್‌ ನಾಯಕರು ಕೂಡಾ ಆ ಭಾಗಕ್ಕೆ ಮಾತ್ರ ಫಿಕ್ಸ್‌ ಆಗಿದ್ದಾರೆ… ಆದ್ರೆ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ನಾಯಕರು ಜೆಡಿಎಸ್‌ಗೆ ಸೋಲುಣಿಸಿದ್ದಾರೆ… ವಿಧಾನಸಭಾ ಚುನಾವಣೆಯಲ್ಲಿ ಎಲ್ಲರಿಗಿಂತ ಮುಂಚೆ ಚುನಾವಣೆ ಪ್ರಚಾರ ಶುರು ಮಾಡಿದವರು ಜೆಡಿಎಸ್‌ ನಾಯಕರು.. ಪಂಚರತ್ನ ಯಾತ್ರೆ ಮೂಲಕ ಕುಮಾರಸ್ವಾಮಿ ಜನಮನ ಸೆಳೆಯೋ ಪ್ರಯತ್ನ ಮಾಡಿದ್ದರು… ಆದ್ರೆ ಕಾಂಗ್ರೆಸ್‌ ಗ್ಯಾರೆಂಟಿ ಭರವಸೆಗಳ ಅಲೆಯಲ್ಲಿ ಪಂಚರತ್ನ ಯಾತ್ರೆ ಮೂಲೆಗುಂಪಾಯಿತು. ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ 19 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಯಿತು.. ಸ್ವತಂ ಕುಮಾರಸ್ವಾಮಿಯವರ ಮಗ ನಿಖಿಲ್‌ ಕುಮಾರಸ್ವಾಮಿ ಹೀನಾಯವಾಗಿ ಸೋತರು.. ಇದರಿಂದ ಕಾಂಗ್ರೆಸ್‌ ವಿರುದ್ಧ ಕೆಂಡಕಾರೋಕೆ ಶುರು ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ತಿರುಗೇಟು ನೀಡೋಕೆ ಮುಂದಾಗಿದ್ದಾರೆ.. ಅದಕ್ಕೆ ಅವರು ಆಯ್ಕೆ ಮಾಡಿಕೊಂಡಿರೋದು ಬಿಜೆಪಿ ಜೊತೆಗೆ ಮೈತ್ರಿ… ಬಿಜೆಪಿಗೂ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್‌ ಬಲ ಬೇಕಾಗಿತ್ತು… ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಫಿಕ್ಸ್‌ ಆಗಿದೆ… ಸಸೀಟು ಹಂಚಿಕೆಯಷ್ಟೇ ಬಾಕಿ ಇದೆ… ಮಾಹಿತಿ ಪ್ರಕಾರ ಜೆಡಿಎಸ್‌ಗೆ ನಾಲ್ಕು ಕ್ಷೇತ್ರ ಸಿಗಬಹುದು…

ಜೆಡಿಎಸ್‌ ನಾಯಕರು ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಕೇಳುತ್ತಿದ್ದಾರೆ… ಆದ್ರೆ ಬಿಜೆಪಿ ಆರು ಕ್ಷೇತ್ರ ಆಗೋದಿಲ್ಲ, ನಾಲ್ಕಕ್ಕೆ ಫಿಕ್ಸ್‌ ಆಗಿ ಎಂದು ಹೇಳುತ್ತಿದೆ… ಕೊನೆಗೆ ನಾಲ್ಕು ಕ್ಷೇತ್ರಗಳೇ ಜೆಡಿಎಸ್‌ಗೆ ಸಿಗೋದು. ಮಾಹಿತಿ ಪ್ರಕಾರ, ಹಾಸನ, ಮಂಡ್ಯ, ತುಮಕೂರು ಹಾಗೂ ಕೋಲಾರ ಕ್ಷೇತ್ರಗಳು ಜೆಡಿಎಸ್‌ ಪಾಲಾಗಲಿವೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್‌ ಅಭ್ಯರ್ಥಿಯಾಗೋದು ಪಕ್ಕಾ ಎಂದು ಹೇಳಲಾಗುತ್ತಿದೆ. ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿಯವರ ಸೋಲಿಗೆ ಡಿಕೆ ಬ್ರದರ್ಸ್‌ ನೇರ ಕಾರಣ… ಹೀಗಾಗಿ ಇವರಿಗೆ ತಿರುಗೇಟು ನೀಡುವುದಕ್ಕಾಗಿ ಕುಮಾರಸ್ವಾಮಿಯವರು ತಮ್ಮ ಮತ್ತೊಬ್ಬ ಎದುರಾಳಿ ಸಿ.ಪಿ.ಯೋಗೇಶ್ವರ್‌ರನ್ನೇ ಬಳಸಿಕೊಳ್ತಿದ್ದಾರೆ… ಶತ್ರುವಿನ ಶತ್ರು ಮಿತ್ರ ಎಂಬಂತೆ ಕುಮಾರಸ್ವಾಮಿ ಇಲ್ಲಿ ಗೇಮ್‌ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಆದ್ರೆ, ಈ ಹೊಂದಾಣಿಕೆಯಿಂದ ಎರಡೂ ಪಕ್ಷಗಳಿಗೆ ಯಾವುದೇ ರೀತಿಯ ಲಾಭವಾಗಲಿಲ್ಲ. ಇಬ್ಬರಿಗೂ ನಷ್ಟ ಅನುಭವಿಸುವಂತಾಯ್ತು… ಮೈತ್ರಿಯಿಂದಾಗಿ ದೇವೇಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲುವಂತಾಯಿತು. ಹೊಂದಾಣಿಕೆಯ ನಡುವೆಯೂ ಜೆಡಿಎಸ್‌ ಒಂದು ಹಾಗೂ ಕಾಂಗ್ರೆಸ್‌ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲ್ಲೋದಕ್ಕೆ ಸಾಧ್ಯವಾಯಿತು. ಬಿಜೆಪಿ 25 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಮಂಡ್ಯದಲ್ಲಿ ಗೆಲುವು ಸಾಧಿಸಿದ್ದರು… ಇದೀಗ ಜೆಡಿಎಸ್‌ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ… ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲೇ ಬಿಜೆಪಿ ನಾಯಕರಿಗೆ ಲಿಂಗಾಯತ ಮತಗಳು ಚೆಲ್ಲಾಪಿಲ್ಲಿಯಾಗುವ ಮುನ್ಸೂಚನೆ ಸಿಕ್ಕಿತ್ತು… ಹೀಗಾಗಿ, ಒಂದಷ್ಟು ಒಕ್ಕಲಿಗ ಮತಗಳನ್ನು ಸೆಳೆದು ನಷ್ಟ ಸರಿದೂಗಿಸಿಕೊಳ್ಳೋ ಪ್ರಯತ್ನ ಮಾಡಿದ್ದರು.. ಆದ್ರೆ ಅದು ಕೈಗೂಡಲಿಲ್ಲ… ದಶಕಗಳಿಂದ ಲಿಂಗಾಯತ ಮತಗಳನ್ನೇ ನಂಬಿಕೊಂಡು ಬಂದಿದ್ದ ಬಿಜೆಪಿಗರಿಗೆ ಈಗ ಒಕ್ಕಲಿಗರ ಮತಗಳೂ ಸಿಕ್ಕರೆ ಕರ್ನಾಟಕದಲ್ಲಿ ಬೇರೂರಬಹುದು ಎಂದು ಜ್ಞಾನೋದಯವಾಗಿದೆ.. ಹೀಗಾಗಿ ಲಿಂಗಾಯತ ಹಾಗೂ ಒಕ್ಕಲಿಗ ಕಾಂಬಿನೇಷನ್‌ ಜಪ ಮಾಡುತ್ತಿದೆ… ಒಕ್ಕಲಿಗ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಸಲುವಾಗಿ ಜೆಡಿಎಸ್‌ ನಾಯಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ… ಜೆಡಿಎಸ್‌ ನಾಯಕರನ್ನು ಮುಂದಿಟ್ಟುಕೊಂಡು ಒಕ್ಕಲಿಗರ ಮತಗಳನ್ನು ಬಿಜೆಪಿಗೆ ಸೆಳೆಯೋ ಪ್ರಯತ್ನ ಭಾಗವೇ ಇದು ಎಂದು ಹೇಳಲಾಗುತ್ತಿದೆ.

ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಹೀನಾಯವಾಗಿ ಸೋತಿದೆ. ಇನ್ನು ಜೆಡಿಎಸ್‌ನ ಆಧಾರ ಸ್ತಂಭಗಳು ದೇವೇಗೌಡರು ಹಾಗೂ ಕುಮಾರಸ್ವಾಮಿಯವರು… ಆದ್ರೆ ದೇವೇಗೌಡರಿಗೆ ವಯಸ್ಸಾಗಿದೆ… ಓಡಾಡಿ ಪ್ರಚಾರ ಮಾಡೋದಕ್ಕೆ ಆಗೋದಿಲ್ಲ… ಕುಮಾರಸ್ವಾಮಿಯವರಿಗೂ ಅನಾರೋಗ್ಯ ಕಾಡುತ್ತಲೇ ಇದೆ… ಅವರಿಗೂ ಹೆಚ್ಚು ಓಡಾಡಿ ಪಕ್ಷ ಸಂಘಟನೆ ಮಾಡೋದು ಆಗಲ್ಲ… ಇವರಿಬ್ಬರು ಸಕ್ರಿಯವಾಗಿ ಭಾಗಿಯಾಗದೇ ಹೋದರೆ ಜೆಡಿಎಸ್‌ ಉಳಿಯೋದಿಲ್ಲ… ಈ ಕಾರಣಕ್ಕಾಗಿಯೇ ಹೇಗಾದರೂ ಮಾಡಿ ಜೆಡಿಎಸ್‌ ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.. ಈ ಮೈತ್ರಿಯಿಂದಾಗಿ, ತುಮಕೂರು ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್‌ ಅನುಕೂಲವಾಗಲಿದೆ… ಇನ್ನು ಹಾಸನದಲ್ಲೂ ಕಾಂಗ್ರೆಸ್‌ಗಿಂತ ಜೆಡಿಎಸ್‌ಗೆ ಪೈಪೋಟಿ ನೀಡ್ತಿದ್ದದ್ದು ಬಿಜೆಪಿ ಪಕ್ಷವೇ.. ಅಲ್ಲೂ ಕೂಡಾ ಮೈತ್ರಿಯಿಂದಾಗಿ ಜೆಡಿಎಸ್‌ ಗೆಲುವಿಗೆ ನೆರವಾಗಬಹುದು… ಇಷ್ಟು ಬಿಟ್ಟರೆ ಜೆಡಿಎಸ್‌ಗೆ ಹೆಚ್ಚೇನೂ ಲಾಭವಾಗೋದಿಲ್ಲ…

ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್‌ಗೆ ಹೆಚ್ಚೇನೂ ಲಾಭವಾಗೋದಿಲ್ಲ ಅನ್ನೋದು ಜೆಡಿಎಸ್‌ ನಾಯಕರಿಗೆ ಗೊತ್ತಿದೆ… ಆದ್ರೆ, ಡಿ.ಕೆ.ಬ್ರದರ್ಸ್‌ಗೆ ತಿರುಗೇಟು ನೀಡಬೇಕು, ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ… ಇದರಿಂದಾಗಿ ಸಣ್ಣ ಪ್ರಮಾಣದ ಲಾಭವಾದರೆ ಸಾಕು ಎಂಬ ಲೆಕ್ಕಾಚಾರದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಇದ್ದಾರೆ… ಇನ್ನೊಂದೆಡೆ, ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ, ತುಮಕೂರು, ಕೋಲಾರದಲ್ಲಿ ಜೆಡಿಎಸ್‌ ಮಕಾಡೆ ಮಲಗಿತ್ತು… ಅಲ್ಲಿನ ಜೆಡಿಎಸ್‌ ವೋಟ್‌ ಬ್ಯಾಂಕ್‌ಗೆ ಕಾಂಗ್ರೆಸ್‌ ಲಗ್ಗೆ ಇಟ್ಟಿತ್ತು… ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಿದರೆ, ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಮುಂದೆ ಮಣಿಯಬೇಕಾಗುತ್ತದೆ… ಇದನ್ನರಿತೇ ಜೆಡಿಎಸ್‌ ನಾಯಕರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ…

ಇನ್ನು ಜೆಡಿಎಸ್‌ ಜೊತೆಗಿನ ಮೈತ್ರಿಯಿಂದ ಬಿಜೆಪಿಗೆ ಸಾಕಷ್ಟು ಲಾಭವಿದೆ… ಯಾಕಂದ್ರೆ ಮೈಸೂರು, ಬೆಂಗಳೂರು ಗ್ರಾಮಾಂತರ, ಉಡುಪಿ-ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಸಾಕಷ್ಟು ಮತಗಳಿವೆ… ಮೈತ್ರಿಯಿಂದಾಗಿ ಅವು ಬಿಜೆಪಿಗೆ ಬರಲಿವೆ… ಇದರಿಂದಾಗಿ ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲೋದು ಅತ್ಯಂತ ಸುಲಭವಾಗುತ್ತದೆ… ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಬ್ಬರಿಗೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಸ್ವಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲುಣಿಸಬೇಕೆಂಬ ಆಸೆ ಇದೆ.. ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್‌ ಬಿಜೆಪಿ ಅಭ್ಯರ್ಥಿಯಾಗೋದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಯೋಗೇಶ್ವರ್‌ ಸ್ಪರ್ಧೆ ಮಾಡಿದರೆ ಅವರದೇ ಆದ ಮತಬ್ಯಾಂಕ್‌ ಇದೆ.. ಜೊತೆ ಇಲ್ಲಿ ಜೆಡಿಎಸ್‌ ಮತಗಳೂ ಸಾಕಷ್ಟಿವೆ. ಎರಡೂ ಸೇರಿದರೆ ಗೆಲ್ಲೋದಕ್ಕೆ ಸಾಧ್ಯವಿದೆ… ಇನ್ನು ಮೈಸೂರಿನಲ್ಲೂ ಜೆಡಿಎಸ್‌ಗೆ ಸಾಕಷ್ಟು ಬಲವಿದೆ… ಸದ್ಯ ಬಿಜೆಪಿ ಪ್ರತಾಪ ಸಿಂಹ ಅಲ್ಲಿ ಸಂಸದರಿದ್ದಾರೆ.. ಪ್ರತಾಪ ಸಿಂಹ ಮೊದಲ ಬಾರಿಗೆ ಅಲ್ಲಿ ಗೆಲ್ಲಬೇಕಾದರೆ, ಅದಕ್ಕೆ ಜೆಡಿಎಸ್‌ ಹಿಂಬಾಗಿಲ ಬೆಂಲವೇ ಕಾರಣವಾಗಿತ್ತು.. ಅಂದು ಜೆಡಿಎಸ್‌ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪ್ರತಾಪ ಸಿಂಹ ಗೆಲುವಿಗೆ ಪರೋಕ್ಷವಾಗಿ ಬೆಂಬಲ ನೀಡಿತ್ತು. ಇದೀಗ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ… ಹೀಗಾಗಿ ಇಲ್ಲಿ ಈ ಬಾರಿ ಜೆಡಿಎಸ್‌-ಬಿಜೆಪಿ ಒಂದಾದರೆ, ಕಾಂಗ್ರೆಸ್‌ ಸೋಲಿಸೋದು ಸುಲಭವಾಗಬಹುದು… ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಒಂದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಪ್ರಾಬಲ್ಯವಿದೆ… ಅಲ್ಲಿ ಈ ಬಾರಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ಸಾಧ್ಯತೆ ಇದೆ.. ಹಾಗೇನಾದರೂ ಆದರೆ, ಜೆಡಿಎಸ್‌ ಬೆಂಬಲದೊಂದಿಗೆ ಅವರು ಗೆಲ್ಲೋದಕ್ಕೆ ಅನುಕೂಲವಾಗಬಹುದು… ಚಿಕ್ಕಮಗಳೂರಿನ ಕಡೂರು ಸೇರಿದಂತೆ ಹಲವು ಕಡೆ ಜೆಡಿಎಸ್‌ಗೆ ಬಲವಿರುವುದು ಬಿಜೆಪಿಗೆ ಅನುಕೂಲ ಮಾಡಿಕೊಡಬಹುದು…
ಒಟ್ಟಾರೆ ಈ ಮೈತ್ರಿಯಿಂದಾಗಿ ಜೆಡಿಎಸ್‌ಗೆ ಬಿಜೆಪಿಯಿಂದ ಸಣ್ಣದೊಂದು ಬಲ ಸಿಗಬಹುದು… ಆದ್ರೆ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಒಕ್ಕಲಿಗರ ಬೆಂಬಲಿ ಸಿಗಲಿದೆ… ಮುಂದೊಂದು ದಿನ ಒಕ್ಕಲಿಗರ ಮತ ಬ್ಯಾಂಕ್‌ನ್ನು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ತೆಕ್ಕೆಯಿಂದ ಕಿತ್ತುಕೊಳ್ಳೋದಕ್ಕೆ ಬಿಜೆಪಿಗೆ ಈ ಚುನಾವಣೆ ಬುನಾದಿಯಾಗಬಹುದು.

Share Post