CrimeDistricts

ಸಂಕ್ರಾಂತಿ ಹಬ್ಬದಂದು ಜವರಾಯನ ಅಟ್ಟಹಾಸ: ನಾಲ್ವರ ಸಾವು

ಹಾವೇರಿ: ಸುಗ್ಗಿ ಹಬ್ಬದಂದು ಫ್ಯಾಮಿಲಿ ಖುಷಿ ಖುಷಿಯಿಂದ ದೇವರ ದರ್ಶನ ಮಾಡಿ ವಾಪಸಾಗುವ ವೇಳೆ ಜವರಾಯ ತನ್ನ ಅಟ್ಟಹಾಸವನ್ನು ಮೆರೆದಿದ್ದಾನೆ. ಎರಡು ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಡೂರು ಬಳಿ ನಡೆದಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಮೆಕ್ಕೆಜೋಳ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ಕಾರುಗಳಿಗೆ ಡಿಕ್ಕಿ ಆಗಿದೆ. ಡಿಕ್ಕಿಯಾದ ಕೂಡಲೇ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮತ್ತಿಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯಿದೆ. ಘಟನೆಯಲ್ಲಿ ಶಂಕರಗೌಡ ನಾಗಪ್ಪಗೌಡರ (35), ಪುನೀತ್​​​ ಹರಮುಚಡಿ (12), ಶಾಂತಮ್ಮ ಹೊಟ್ಟಿಗೌಡರ (32), ರಘು ಹೊಟ್ಟಿಗೌಡರ (14) ಮೃತ ದುರ್ದೈವಿಗಳು.

2 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಒಂದೇ ಕುಟುಂಬದವರು ಎಂದು ಮಾಹಿತಿ ಲಭ್ಯವಾಗಿದೆ. ಎಲ್ಲರೂ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿ ಅಜ್ಜಯ್ಯನ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಒಟ್ಟು ಆರು ಜನರಿಗೆ ಗಾಯವಾಗಿದೆ. ಎರಡು ಕಾರುಗಳಲ್ಲಿ ಹತ್ತು ಜನರು ಸಂಚರಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ರಟ್ಟೀಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ರಟ್ಟೀಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post