ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಟಾಂಗಾ: ಸಮುದ್ರದ ನೀರಿನೊಳಗೆ ಜ್ವಾಲಾಮುಖಿ ಸ್ಪೋಟಗೊಂಡಿರುವ ಘಟನೆ ಪೆಸಿಪಿಕ್ ದ್ವೀಪ ರಾಷ್ಟ್ರ ಟಾಂಗಾದಲ್ಲಿ ಶನಿವಾರ ನಡೆದಿದೆ. ಘಟನೆಯಿಂದ ನ್ಯೂಜಿಲ್ಯಾಂಡ್, ಯುಎಸ್ ಸೇರಿದಂತೆ ಹಲವು ಸ್ಥಳಗಳಲ್ಲಿ ಸುನಾಮಿ ಆತಂಕ ಎದುರಾಗಿದೆ. Hunga Tonga-Hunga Haʻapai ಎನ್ನುವ ಜ್ವಾಲಾಮುಖಿ ಸ್ಪೋಟಗೊಂಡಿದೆ. ಪರಿಣಾಮ 20 ಕಿಮೀ ವರೆಗೆ ಹೊಗೆ ಸಹಿತ ಅನಿಲ ಚಿಮ್ಮಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದ್ದಂತೆ ಟಾಂಗಾದ ಸುತ್ತಮುತ್ತ ಭಾರೀ ಗಾಳಿ, ಗುಡುಗು, ಮಳೆ ಸಂಭವಿಸಿರುವುದಾಗಿ ಟಾಂಗಾ ಹವಾಮಾನ ಇಲಾಖೆ ವರದಿ ಮಾಡಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಹಾಗೂ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಜ್ವಾಲಾಮುಖಿ ಹೊರಹೊಮ್ಮಿರುವ ವಿಡಿಯೋವನ್ನು ಉಪಗ್ರಹ ಸೆರೆಹಿಡಿದಿರುವ ದೃಶ್ಯವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಘಟನೆಯಿಂದ ಮನೆಗಳ ಕಿಟಕಿ, ಬಾಗಿಲುಗಳು ಅಲುಗಾಡುತ್ತಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರನ್ನು ಪೊಲೀಸರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ. ಟಾಂಗಾ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
Tonga's Hunga Tonga volcano just had one of the most violent volcano eruptions ever captured on satellite. pic.twitter.com/M2D2j52gNn
— US StormWatch (@US_Stormwatch) January 15, 2022