ಮೇಕೆದಾಟು ಪಾದಯಾತ್ರೆ : ಜನರನ್ನು ದುಡ್ಡು ಕೊಟ್ಟು ಕರೆಸುತ್ತಿದ್ದಾರೆ – ಸಿ ಪಿ ಯೋಗೀಶ್ವರ್
ರಾಮನಗರ : ಕೊರೊನಾ ಸಂಧಿಗ್ದ ಪರಿಸ್ಥಿತಿಯಲ್ಲಿಯೂ ಕಾಂಗ್ರೆಸ್ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದೆ. ಯಶಸ್ವಿ ನಾಲ್ಕು ದಿನಗಳ ನಂತರ ಸರ್ಕಾರ ಪಾದಯಾತ್ರೆ ತಡೆಯಲು ಯೋಚಿಸುತ್ತಿದೆ. ಈ ಪಾದಯಾತ್ರೆ ಕುರಿತು ಮಾತನಾಡಿದ ಸಿ ಪಿ ಯೋಗೇಶ್ವರ್ ಅವರು ಪಾದಯಾತ್ರೆಯನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಸಿ ಪಿ ಯೋಗೇಶ್ವರ್ ಡಿ ಕೆ ಬ್ರದರ್ಸ್ ಅನ್ನು ಮೊದಲು ಬಂಧಿಸಬೇಕೆಂದು ಆಗ್ರಹಿಸಿದರು. ಡಿ ಕೆ ಶಿವಕುಮಾರ್ ಅವರ ಪಾದಯಾತ್ರೆ ಗಂಭೀರತೆಯಿಂದ ಕೂಡಿಲ್ಲ, ಡಿಕೆ ಶಿವಕುಮಾರ್ ನಾಟಕ ಮಾಡುತ್ತಿದ್ದಾರೆ, ಕಾಂಗ್ರೆಸ್ ನವರು ಕೊವಿಡ್ ತೀವ್ರತೆಯನ್ನು ಅರ್ಥ ಮಾಡಿಕೊಂಡಿಲ್ಲ, ಮೂರನೇ ಅಲೆ ಹರಡುತ್ತಿರುವ ವೇಗದ ಬಗ್ಗೆ ಅವರಿಗೆ ಅರಿವಿದ್ದಂತೆ ಕಾಣ್ತಿಲ್ಲ. ಡಿಕೆ ಶಿವಕುಮಾರ್ ನೀರಾವರಿ ಸಚಿವರಾಗಿದ್ದಾಗ ಜನರಿಗೆ ಅನುಕೂಲವಾಗುವ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಈ ಕೂಡಲೇ ಪಾದಯಾತ್ರೆ ನಿಲ್ಲಿಸುವಂತೆ ಆದೇಶ ಹೊರಡಿಸಬೇಕು. ಇಲ್ಲವಾದರೆ ದುರ್ಬಲ ಸರ್ಕಾರ ಎಂಬ ಅಭಿಪ್ರಾಯ ಬರುತ್ತದೆ ಎಂದರು.
ಒಂದು ವೇಳೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆಂದರೆ ಬಿಜೆಪಿ ಕಾರ್ಯಕರ್ತರೇ ರಸ್ತೆಗೆ ಇಳಿದು ಪಾದಯಾತ್ರೆ ತಡೆಯುತ್ತೇವೆ ಎಂದು ಯೋಗೀಶ್ವರ್ ಹೇಳಿದರು.
ಡಿ ಕೆ ಶಿವಕುಮಾರ್ ಅವರು ಜನರಿಗೆ ದುಡ್ಡು ಕೊಟ್ಟು ಕರೆಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸಲು ಬಂದವರು ಕೊರೊನಾ ತೆಗೆದುಕೊಂಡು ಹೋಗಿ ಎಲ್ಲರಿಗೂ ಕೊರೊನಾ ಹಂಚುತ್ತಿದ್ದಾರೆ ಈ ಕೂಡಲೇ ಡಿ ಕೆ ಶಿವಕುಮಾರ್ ಮತ್ತು ಅವರ ತಮ್ಮನನ್ನು ಬಂಧಿಸಿ ಎಂದು ಯೋಗೇಶ್ವರ್ ಆಕ್ರೋಶ ಹೊರ ಹಾಕಿದರು.