Districts

ಬ್ಯಾಂಕ್‌ಗೆ ಬೆಂಕಿ ಇಟ್ಟು ವಿಕೃತಿ ಮೆರೆದ ವ್ಯಕ್ತಿ ವಶಕ್ಕೆ

ಹಾವೇರಿ: ಸಾಲ ಕೊಡ್ಲಿಲ್ಲ ಎಂಬ ಕಾರಣಕ್ಕೆ ಕೆನರಾ ಬ್ಯಾಂಕ್‌ಗೆ‌ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಘಟನೆ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯಲ್ಲಿ ನಡೆದಿದೆ. ಸರ್ಕಾರೇತರ ಸಂಸ್ಥೆ ಹಾಗೂ ಎನ್‌ಜಿಓ ನಡೆಸಿಕೊಂಡಿದ್ದ ವಾಸಿಂ ಅವುಗಳ ನಿರ್ವಹಣೆಗಾಗಿ ಕೈ ತುಂಬಾ ಸಾಲ ಕೂಡ ಮಾಡಿಕೊಂಡಿದ್ದ. ಸಾಲ ತೀರಿಸಲು ಹಲವು ಬ್ಯಾಂಕ್‌ಗಳಲ್ಲಿ ಲೋನ್‌ಗಾಗಿ ಅರ್ಜಿ ಹಾಕಿ ಸಾಲ ಸಿಗದೆ ಸುಸ್ತಾಗಿದ್ದ. ಕೊನೆಯದಾಗಿ ಬ್ಯಾಡಗಿ ಜಿಲ್ಲೆಯ ಹೆಡಿಗ್ಗೊಂಡ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಲೋನ್‌ಗಾಗಿ ಅರ್ಜಿ ಸಲ್ಲಿಸಿದ್ದ. ಕೆಲವು ತಿಂಗಳುಗಳಿಂದ ಅಲೆದರೂ ಬ್ಯಾಂಕ್‌ನಿಂದ ಲೋನ್‌ ಸಿಗದ ಕಾರಣ ಕುಪಿತಗೊಂಡು ಬೆಂಕಿ ಹಚ್ಚಿ ಜೈಲು ಪಾಲಾಗಿದ್ದಾನೆ.

ಈತನ ವಿರುದ್ಧ ಬ್ಯಾಂಕ್‌ ಮ್ಯಾನೇಜರ್‌ ಹೀರಾಮನ್ ಎಮ್. ನಾಯಕ್ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಾಧ ಸಂಖ್ಯೆ 02/2022 ಕಲಂ 435 436 427 447 ಐಪಿಸಿ  3 ಮತ್ತು 4 ಕರ್ನಾಟಕ ಪ್ರಿವೇನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಯಾಕ್ಟ್-1984ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ‌

ಪಕ್ಕಾ ಪ್ಲಾನ್‌ ಮಾಡಿದ್ದ ವಾಸಿಂ

ಬ್ಯಾಂಕಿಗೆ ಬೆಂಕಿ ಹಚ್ಚಲು ಫುಲ್‌ ಪ್ಲಾನ್‌ ಮಾಡಿಕೊಂಡಿದ್ದ ವಾಸಿಂ ಬೈಕ್‌ ನಂಬರ್‌ ಕಿತ್ತೆಸೆದು ಹಾವೇರಿಗೆ ಬಂದು ಪೆಟ್ರೋಲ್‌ ಖರೀದಿ ಮಾಡಿದ್ದಾನೆ. ಬಳಿಕ ಮಧ್ಯರಾತ್ರಿವರೆಗೂ ಓಡಾಡಿ ಹೆಡಿಗ್ಗೊಂಡ ಗ್ರಾಮಕ್ಕೆ ಬಂದು ಬ್ಯಾಂಕ್‌ನ ಹಿಂಬದಿ ಅಂಗನವಾಡಿ ಕಟ್ಟಡದ ಮೇಲೆ ಹತ್ತಿ, ಬ್ಯಾಂಕಿನ ಕಿಟಕಿ ಗಾಜು ಒಡೆದು ಪೆಟ್ರೋಲ್‌ ಸುರಿದಿದ್ದಾನೆ. ಬಳಿಕ ತನ್ನ ಬಳಿಯಿದ್ದ ಲೈಟರ್‌ನಿಂದ ಬೆಂಕಿ ಹಚ್ಚಿದ್ದಾನೆ. ಕಟ್ಟಡದಿಂದ ಕೆಳಗಿಳಿಯುವಾಗ ಚರಂಡಿಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ಕೂಡಲೇ ದೊಡ್ಡದಾಗಿ ಶಬ್ದ ಕೇಳಿಸಿದೆ. ಅಕ್ಕಪಕ್ಕದ ಜನ ಆಚೆ ಬಂದು ನೋಡಿದಾಗ ಬೈಕ್‌ ಹತ್ತಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ವಾಸಿಂನನ್ನು ಕಟ್ಟಿ ಹಾಕಿ ಸರಿಯಾಗಿ ಗೂಸಾ ಕೊಟ್ಟಿದ್ದಾರೆ.

ಬ್ಯಾಂಕ್‌ಗೆ ಬೆಂಕಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಜನ ಜಮಾಯಿಸಿದ್ರು. ಬ್ಯಾಂಕ್‌ನಲ್ಲಿಟ್ಟಿದ್ದ ಒಡವೆ ಹಣ ಎಲ್ಲ ಸುಟ್ಟು ಬೂದಿಯಾಗುತ್ತಲ್ಲ ಎಂಬ ಭಯ ಎಲ್ಲರಲ್ಲೂ ಕಾಡಿತ್ತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ರು. ಕೇವಲ ಪೀಠೋಪಕರಣಗಳು, ಕಂಪ್ಯೂಟರ್‌, ಪ್ರಿಂಟರ್ಸ್‌ ಒಂದಷ್ಟು ವಸ್ತುಗಳು ಮಾತ್ರ ಸುಟ್ಟು ಕರಕಲಾಗಿದ್ದವು. ಲಾಕರ್‌ ಭದ್ರವಾಗಿವೆ ಎಂದು ತಿಳಿಯುತ್ತಿದ್ದಂತೆ ಜನ ನಿಟ್ಟುಸಿರು ಬಿಟ್ಟರು. ವಿಕೃತಿ ಮೆರೆದ ವಾಸಿಂನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share Post